Feb 7, 2014

ಸಾಮಾಜಿಕ ಸ್ಥಿತ್ಯಂತರ ಮತ್ತು ರಂಗಭೂಮಿ


          ಭಾರತೀಯ ರಂಗ ಇತಿಹಾಸವನ್ನು ಸ್ಥೂಲವಾಗಿ ಗಮನಿಸಿದಾಗ ಪ್ರಮುಖ ಮೂರು ಘಟ್ಟಗಳು ಅಥವಾ ಪರಂಪರೆಗಳು ಎದ್ದು ಕಾಣುತ್ತವೆ. ಅವುಗಳು ಸಾಂಪ್ರದಾಯಿಕ,ಧಾರ್ಮಿಕ ಆಚರಣೆಗಳೊಡನೆ ಮಿಳಿತವಾಗಿ ಅವುಗಳಿಂದ ಪ್ರೇರಿತವಾದ 'ಜಾನಪದ ರಂಗ ಪರಂಪರೆ'; ಈ ದೇಸಿ ಪ್ರಕಾರಕ್ಕೆ ಭಿನ್ನವಾಗಿ ಪಾಶ್ಚಾತ್ಯ ಮತ್ತು ಪಾರ್ಸಿ ರಂಗಭೂಮಿಯಿಂದ ಪ್ರಭಾವಿತವಾದಂತಹ 'ವೃತ್ತಿ ನಾಟಕ ಕಂಪೆನಿಗಳು' ಮತ್ತು ಇವೆರಡನ್ನೂ ಮೀರಿ ಎಲ್ಲಾ ಹಳೆಯ ಕಟ್ಟಳೆಗಳನ್ನು ಮುರಿದು ಹೊಸದಾಗಿ ಕಟ್ಟಿದ ಇತ್ತೀಚಿನ 'ಆಧುನಿಕ/ಹೊಸಾಲೆ ರಂಗಭೂಮಿ'.
ನಾಗರೀಕ ಪೂರ್ವ ಸಮಾಜದಲ್ಲಿ ಮನುಷ್ಯ ತನ್ನ ಪರಿಸರವನ್ನ, ಸುತ್ತಲಿನ ಜೀವ ಸಂಕುಲವನ್ನ ಅನುಕರಿಸಿದಾಗ ಹುಟ್ಟಿಕೊಂಡ 'ಅಭಿನಯ'; ಮನುಷ್ಯ ತನ್ನ ಸುತ್ತಲಿನ ಪರಿಸರದ ಅಚ್ಚರಿ, ಅದ್ಭುತಗಳಿಗೆ ಮುಖಾಮುಖಿಯಾಗಿ ಬದಲಾಗುತ್ತಾ ಬೆಳೆಯುತ್ತಾ ಹೋದಂತೆ ಕಾಲಕ್ರಮೇಣ ಜಾನಪದ ರಂಗ ಪ್ರಕಾರಗಳಾಗಿ ರೂಪುಗಂಡಿತು. ಭಾರತದ ಮೇಲೆ ನಡೆದ ದಾಳಿಗಳಿಂದಾಗಿ ಬಳುವಳಿಯಾಗಿ ಬಂದ ದಾಳಿಕೋರರ ಕಲೆ, ಸಂಸ್ಕೃತಿ ಭಾರತೀಯ ರಂಗಭೂಮಿಯ ಮೇಲೆ ಗಾಢವಾದ ಪರಿಣಾಮವನ್ನೇ ಮಾಡಿತು. ಬ್ರಿಟಿಷರು ತಮ್ಮ ಮನೋರಂಜನೆಗಾಗಿ ಭಾರತದಲ್ಲಿ ಆಡುತ್ತಿದ್ದ ನಾಟಕವನ್ನು ಕದ್ದು ನೋಡಿ, ಅದರ ಚಿತ್ರ ಚೌಕಟ್ಟಿನಿಂದ ಸ್ಪೂರ್ತಿಗೊಂಡ ಅನೇಕರು ಭಾರತದಲ್ಲಿ ವೃತ್ತಿ ಕಂಪೆನಿಗಳನ್ನ ಪ್ರಾರಂಭಿಸಿದರು. ಪಾರ್ಸಿ ರಂಗಭೂಮಿಯ ಆಕರ್ಷಕ ವೇಷಭೂಷಣ ಈ ಕಂಪೆನಿ ನಾಟಕಗಳಿಗೆ ಇನ್ನಷ್ಟು ಮೆರಗು ನೀಡಿತು. ಈ ಕಂಪೆನಿಗಳು ಸುಮಾರು ಇನ್ನೂರು ಮುನ್ನೂರು ಕಲಾವಿದರನ್ನ ಪೋಷಿಸುದರ ಜೊತೆಗೆ ಆನೆ, ಕುದುರೆ ಮುಂತಾದ ಪ್ರಾಣಿಗಳನ್ನೂ ರಂಗದ ಮೇಲೆ ತರುವಷ್ಟರ ಮಟ್ಟಿನ ಯಶಸ್ಸನ್ನು ಕಂಡವು. ಎಪ್ಪತ್ತರ ದಶಕದಲ್ಲಿ ನಡೆದ ಅನೇಕ ಚಳವಳಿಗಳು, ಸಾಮಾಜಿಕ, ರಾಜಕೀಯ ಬದಲಾವಣೆ, ನವಯುಗದ ನವಾನ್ವೇಷಣೆ, ಬ್ರೆಕ್ಟ್, ಗ್ರೋಟೊವೆಸ್ಕಿ, ಪೀಟರ್ ಬ್ರೂಕ್ ಮುಂತಾದ ರಂಗ ಸಿದ್ಧಾಂತಿಗಳ ಪ್ರಭಾವ ಮತ್ತು ಇವೆಲ್ಲದವುದರೊಡನೆ ಮೇಳೈಸಿದ ಹೊಸತನದ ಹಪಹಪಿಕೆ ಸಮಕಾಲಿನ ರಂಗಭೂಮಿಯ, ರಂಗ ಚಳುವಳಿಯ ಹುಟ್ಟಿಗೆ ಕಾರಣವಾಯಿತು. ಅದಾಗಲೇ ವೃತ್ತಿ ಕಂಪೆನಿಗಳು ಸಿನೆಮಾದ ಅಬ್ಬರಕ್ಕೆ ನಲುಗಿ ನೆಲಕಚ್ಚಿದ್ದವು. ಇಂತಹ ಸಮಯದಲ್ಲಿ ರಂಗಭೂಮಿಯ ಹೊಸ ಹುಟ್ಟು ಸಂಚಲನ ಮೂಡಿಸಿದ್ದಲ್ಲದೆ ಎಲ್ಲೆಲ್ಲೂ ರಂಗತಂಡಗಳು, ಚಳುವಳಿಗಳು ತಲೆ ಎತ್ತಿದವು. ಬಾದಲ್ ಸರ್ಕಾರ್, ಉತ್ಪಲ್ ದತ್, ಹಬೀಬ್ ತನ್ವೀರ್, ಗಿರೀಶ್ ಕಾರ್ನಾಡ್, ವಿಜಯ ತೆಂಡುಲ್ಕರ್ ಹೀಗೆ ಅನೇಕರು ತಮ್ಮ ಹೊಸತನದ ಮೂಲಕ ಛಾಪು ಮೂಡಿಸಿದರು. ರಾಷ್ಟ್ರೀಯ ನಾಟಕ ಶಾಲೆಯಿಂದ ಹೊರಬಂದ ಯುವ ರಂಗಕರ್ಮಿಗಳು ದೇಶದೆಲ್ಲೆಡೆ ರಂಗ ತರಬೇತಿಗಳ ಮೂಲಕ, ನಾಟಕ ಪ್ರದರ್ಶನಗಳ ಮೂಲಕ ಮತ್ತು ರಂಗ ಚಳುವಳಿಗಳ ಮೂಲಕ ಭರವಸೆ ಹುಟ್ಟಿಸಿದರು.
          ಇಂತಹ ರಂಗ ಚಳುವಳಿಯ ಭಾಗವಾಗಿಯೇ ಕರ್ನಾಟಕದಲ್ಲಿ ಪ್ರಸನ್ನ, ಸಿ.ಜಿ.ಕೆ, ಗಂಗಾಧರಸ್ವಾಮಿ ಮುಂತಾದವರ ನೇತೃತ್ವದಲ್ಲಿ 'ಸಮುದಾಯ' ತನ್ನ ಬೀದಿ ನಾಟಕಗಳ ಮೂಲಕ, ಜಾಥಾಗಳ ಮೂಲಕ ಜನರೆಡೆಗೆ ಹೊರಟಿತು. ಹೆಗ್ಗೋಡು ಎಂಬ ಕುಗ್ರಾಮದಲ್ಲಿ 'ನೀನಾಸಂ' ಅಸ್ತಿತ್ವಕ್ಕೆ ಬಂತು. ಕೆ. ವಿ. ಸುಬ್ಬಣ್ಣ ತನ್ನ ಸುತ್ತಲ ಗೆಳೆಯರೊಂದಿಗೆ ಹವ್ಯಾಸಿ ತಂಡವಾಗಿ ಪ್ರಾರಂಭಿಸಿದ 'ನೀನಾಸಂ' ಕೆಲವೇ ವರ್ಷಗಳಲ್ಲಿ ಕರ್ನಾಟಕ ರಂಗಭೂಮಿಗೆ ಹೊಸ ತಿರುವನ್ನು ಕೊಟ್ಟ ಸಂಸ್ಥೆಯ ರೂಪ ಪಡೆಡಿದ್ದಲ್ಲದೆ, ಯುವ ರಂಗಾಸಕ್ತರಿಗೆ ಶಾಸ್ತ್ರೀಯವಾಗಿ ರಂಗಭೂಮಿಯನ್ನು ಅಭ್ಯಸಿಸಲು ಅನುವು ಮಾಡಿಕೊಡುವ ರಂಗಶಾಲೆಯಾಯಿತು. ನೂರಾರು ಉದಯೋನ್ಮುಖ ಕಲಾವಿದರು 'ನೀನಾಸಂ'ನಿಂದ ಕಲಿತು ಕರ್ನಾಟಕದಾದ್ಯಂತ ರಂಗ ಕೃಷಿ ಪ್ರಾರಂಭಿಸಿದರು. ಇದೆ ಹೊತ್ತಿನಲ್ಲಿ ನಮ್ಮ ಸರ್ಕಾರ ಬಿ.ವಿ.ಕಾರಂತರನ್ನು ಮರಳಿ ಕರ್ನಾಟಕ್ಕೆ ಕರೆಸಿಕೊಂಡಿತು. ಕಾರಂತರು 'ನಾಟಕ ಕರ್ನಾಟಕ ರಂಗಾಯಣ'ವನ್ನು ಪ್ರಾರಂಭಿಸಿದರು. ವಿವಿಧ ಜಿಲ್ಲೆಗಳಿಂದ ರಂಗಭೂಮಿಯನ್ನ ಗಂಭೀರವಾಗಿ ಸ್ವೀಕರಿಸಲು ತಯಾರಾಗಿದ್ದ ಸಮರ್ಥ ಯುವಕ ಯುವತಿಯರನ್ನ ಮೈಸೂರಿನಲ್ಲಿ ಕಲೆಹಾಕಿ ಕರ್ನಾಟಕದಲ್ಲಿ ಆಧುನಿಕ ರಂಗಭೂಮಿಯ ಮೊದಲ ರೆಪರ್ಟರಿಯನ್ನು ಪ್ರಾರಂಭಿಸಿದರು. ನಂತರದಲ್ಲಿ ಸಾಣೇಹಳ್ಳಿಯ 'ಶಿವಸಂಚಾರ' ಕೂಡ ಪ್ರಮುಖ ರಂಗಶಾಲೆಯಾಗಿ ರೂಪುಗೊಂಡಿತು. ನೀನಾಸಂ, ಶಿವಸಂಚಾರದಂತಹ ರಂಗಶಾಲೆಗಳು ರಂಗಭೂಮಿಯ ಶಿಸ್ತು, ವೃತ್ತಿಪರತೆಯನ್ನು ಅಳವಡಿಸಿಕೊಂಡರೆ ರಂಗಾಯಣ ಪ್ರಯೋಗಶೀಲತೆಯನ್ನ ಮೈಗೂಡಿಸಿಕೊಂಡಿತು. ನೀನಾಸಂ ತಿರುಗಾಟ, ರಂಗಾಯಣದ ಪ್ರಭಾವ ಮತ್ತು ಎನ್.ಎಸ್.ಡಿ ಪದವೀಧರ ರಂಗಕರ್ಮಿಗಳ ರಂಗ ತರಬೇತಿ ಶಿಬಿರಗಳಿಂದಾಗಿ ಕರ್ನಾಟಕದಲ್ಲಿ ಅನೇಕ ಹವ್ಯಾಸಿ ತಂಡಗಳು ಉದ್ಭವಿಸಿದವು. ರಂಗಭೂಮಿಯನ್ನ ಪ್ರಮುಖ ಸಂವೇದನಾ ಮಾಧ್ಯಮವಾಗಿ, ಅಭಿವ್ಯಕ್ತಿಯ ಅಂಗವಾಗಿ ಬಳಸುವುದರ ಜೊತೆಯಲ್ಲಿಯೇ ಪ್ರಖರ ವಿಚಾರಧಾರೆಗಳನ್ನ ರಂಗ ಪ್ರಯೋಗಗಳ ಮೂಲಕ ಜನರಿಗೆ ತಲುಪಿಸುವ ರಂಗಕಾಯಕದಲ್ಲಿ ಈ ಹವ್ಯಾಸಿ ತಂಡಗಳು ತೊಡಗಿಕೊಂಡವು. ವಿವಿಧ ಆಸಕ್ತಿಯ, ವಿವಿಧ ಮನೋಭಾವದ, ವಿವಿಧ ವಯೋಮಾನದ, ಬೇರೆ ಬೇರೆ ಸ್ಥರಗಳ ಆಸಕ್ತರನ್ನು ಒಂದೆಡೆ ಒಗ್ಗೂಡಿಸಿ ಒಂದೇ ವಿಚಾರದ ಕುರಿತು ಚಿಂತಿಸುವಂತೆ ಮಾಡುವುದರ ಮೂಲಕ ಸಮಾಜವನ್ನ ಚಿಕಿತ್ಸಕ ದೃಷ್ಟಿಯಲ್ಲಿ ನೋಡಲು, ಚಳುವಳಿಗಳನ್ನ ರೂಪಿಸಲು ಸಾಧ್ಯವೆಂದು ಮನಗಂಡ ಹವ್ಯಾಸಿ ತಂಡಗಳು ಆ ದಿಶೆಯಲ್ಲಿ ಕೆಲಸ ಮಾಡಿದವು.
         ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ಎಲ್ಲಾ ರಂಗಮೂಲಗಳು ತಮ್ಮ ಸ್ವರೂಪ, ಪ್ರಸ್ತುತತೆ ಮತ್ತು ಸ್ಥಿತಿಗತಿಗಳಲ್ಲಿ ಅನೇಕ ಬದಲಾವಣೆಗಳನ್ನ, ರೂಪಾಂತರಗಳನ್ನ ಕಂಡಿವೆ. ಹಲವು ಹವ್ಯಾಸಿ ತಂಡಗಳು ಕಣ್ಮರೆಯಾಗಿವೆ. ದಿನಕ್ಕೊಂದು ತಂಡ ನಾಯಿಕೊಡೆಯಂತೆ ಹುಟ್ಟಿ ಕೆಲವೇ ದಿನಕ್ಕೆ ಹೇಳ ಹೆಸರಿಲ್ಲದಂತಾಗುತ್ತಿದೆ. ಇನ್ನೂ ಕೆಲವು ತಂಡಗಳು ಶಿತಿಲಗೊಂಡು ಕೃತಕವಾಗಿ ಉಸಿರಾಡುತ್ತಿವೆ. ಮತ್ತೊಂದಿಷ್ಟು ತಂಡಗಳು ಸರ್ಕಾರಿ ಅನುದಾನಕ್ಕಾಗಿ ವರ್ಷಕ್ಕೊಂದು ನಾಮಕಾವಸ್ಥೆಯ ನಾಟಕವಾಡಿ ಹಣಮಾಡುತ್ತಿವೆ. ಮತ್ತು ಬೆರಳೆಣಿಕೆಯ ತಂಡಗಳು ನಿಜವಾದ ರಂಗಕಾಯಕದಲ್ಲಿ ತೊಡಗಿಸಿಕೊಂಡಿವೆ. ಇಂತಹ ಬದಲಾದ ಸಮಾಜದಲ್ಲಿ ರಂಗಭೂಮಿಯ ಸ್ಥಾನವೇನು? ನಿಜಕ್ಕೂ ರಂಗಭೂಮಿ ಈ ಸಮಾಜಕ್ಕೆ ಬೇಕೆ? ಬೇಕಿದ್ದರೆ ಅದು ಎಂತಹ ರಂಗಭೂಮಿ??
          ಇಂದಿನ ಸಮಾಜಕ್ಕೆ, ಸಾಮಾಜಿಕ ತಲ್ಲಣಗಳಿಗೆ, ಕುಸಿಯುತ್ತಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಔದ್ಯೋಗಿಕ ಗುಣಮಟ್ಟಕ್ಕೆ, ಮಾನವೀಯತೆ ಹಾಗೂ ಮನುಷ್ಯ ಸಂಬಂಧಗಳ ಮರುಹುಟ್ಟಿಗೆ, ರಾಜಕೀಯ ಬದಲಾಣೆಗಳಿಗೆ... ಹೀಗೆ ಎಲ್ಲಾ ಕ್ಷೇತ್ರಕ್ಕೂ ರಂಗಭೂಮಿ ಅತೀ ಅಗತ್ಯ ಮತ್ತು ಅನಿವಾರ್ಯ. ಶತಮಾನಗಳಿಂದ ಯಾವುದೇ ಹೊಸತನವನ್ನ ಕಾಣದ ನಮ್ಮ ಶಿಕ್ಷಣ ವ್ಯವಸ್ಥೆ, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು 'ವಿದ್ಯಾವಂತ'ರನ್ನು ತಯಾರಿಸುವ ಕಾರ್ಖಾನೆಗಳಾಗಿವೆ.  ವಿದ್ಯಾರ್ಥಿಗಳಿಗೆ, ಯುವಜನತೆಗೆ ಸರಳವಾಗಿ ಬದುಕುದನ್ನೇ ಕಲಿಸದ ಶಿಕ್ಷಣ ವ್ಯವಸ್ಥೆ ಹಣ ಮಾಡುವುದರ ಕಡೆಗೇ ವಿದ್ಯಾರ್ಥಿಗಳನ್ನ ಬಲವಂತವಾಗಿ ನೂಕುತ್ತಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ವಿದ್ಯಾರ್ಥಿಗಳು ಹತಾಶರಾಗಬೇಕಾದರೆ ಅದಕ್ಕೆ ಅವರ ಪೋಷಕರು, ಶಿಕ್ಷಕರು, ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ಅವರ ಮೇಲೆ ಹೇರಿರುವ "ಶಿಕ್ಷಣ" ಎಂಬ ಹೊರೆಯೇ ಕಾರಣ. ಒಬ್ಬ ವಿದ್ಯಾರ್ಥಿಯ ಜೀವನೋತ್ಸಾಹವನ್ನೂ, ಜೀವನ ಪ್ರೀತಿಯನ್ನೂ ಕುಗ್ಗಿಸಿ, ತನ್ನ ಭವಿಷ್ಯವನ್ನ ರೂಪಿಸಿಕೊಳ್ಳುವ ಯಾ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನೇ ಕಸಿದುಕೊಂಡು; ಭಯ, ಆತಂಕದ ನೆರಳಿನಲ್ಲಿ ಭಾವಹೀನರಾಗಿ ಹೆಣಗಳಂತೆ ಬದುಕುವ ಹಾಗೆ ಮಾಡಿರುವ ಈ ವ್ಯವಸ್ಥೆಯಲ್ಲಿ ರಂಗಭೂಮಿ ಮಾತ್ರ ಛಾಯೆಯನ್ನು ಹಿಮ್ಮೆಟ್ಟಿಸಬಲ್ಲ ಸೂರ್ಯನಂತೆ ಈ ಎಲ್ಲಾ ಭಯೋತ್ಪಾದಕ ಶಕ್ತಿಯ ವಿರುದ್ಧ ನಿಲ್ಲಬಲ್ಲ ಬೃಹತ್ ಶಕ್ತಿಯಾಗಿದೆ. ಕಬ್ಬಿಣದ ಕಡಲೆಯಂತಿರುವ ನೀರಸವಾದ ಪಠ್ಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ರಂಜನೀಯವಾಗಿ ಕಲಿಯಲು ರಂಗಾಠಗಳು, ನಾಟಕಗಳು ಸಹಕಾರಿಯಾಗಿವೆ. ಜ್ಞಾಪಕ ಶಕ್ತಿ, ಭಾಷಾ ಸ್ಪಷ್ಟತೆ, ಆತ್ಮ ವಿಶ್ವಾಸ, ಹೊಂದಾಣಿಕೆ, ಕ್ರಿಯಾಶೀಲತೆ... ಇವೆಲ್ಲಾ ರಂಗಭೂಮಿ ಕೊಡುವ ಶಿಕ್ಷಣ. ಯಾವಾಗ ಪಠ್ಯದ ಜೊತೆಗೆ ರಂಗಭೂಮಿಯನ್ನ ಅಳವಡಿಸಿಕೊಳ್ಳುತ್ತೇವೆಯೋ ಆಗ ವಿದ್ಯಾರ್ಥಿಗಳಿಗೆ ಅರಿವಿಲ್ಲದೆ ಇವೆಲ್ಲವೂ ಕರಗತವಾಗುವುದರೊಂದಿಗೆ ಆ ಪಠ್ಯ ಇನ್ನಷ್ಟು ರುಚಿಸುತ್ತದೆ. ಗುಂಪಿನಲ್ಲಿ ತನ್ನನ್ನು ತಾನು ಹೇಗೆ ಗುರಿತಿಸಿಕೊಳ್ಳಬೇಕು? ನನ್ನ ಸಾಧ್ಯತೆ ಮತ್ತು ದೌರ್ಬಲ್ಯಗಳೇನು? ಸಮಾಜದೊಂದಿಗೆ ವ್ಯವಹರಿಸುವುದು ಹೇಗೆ? ಆಕಸ್ಮಿಕ ಅವಗಢಗಳಿಗೆ ಹೇಗೆ ಸ್ಪಂದಿಸಬೇಕು.. ಹೀಗೆ ಜೀವನಾವಶ್ಯಕ ಕೌಶಲ್ಯಗಳನ್ನ ರಂಗಭೂಮಿ ಮಾತ್ರವೇ ಕಲಿಸಬಲ್ಲದು. ಪಠ್ಯದ ಜೊತೆ ರಂಗಭೂಮಿಯಂತಹ ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯಕ. ಈ ದಿಸೆಯಲ್ಲಿ ಬದುಕನ್ನು ರೂಪಿಸಬಲ್ಲ, ಮನುಷ್ಯರನ್ನು ಪ್ರೀತಿಸಲು, ಗೌರವಿಸಲು ಕಲಿಸುವ ಹಾಗೂ ಭೌದ್ಧಿಕ ವಿಕಾಸಕ್ಕೆ ಪೂರಕವಾಗಿರುವ ರಂಗಭೂಮಿ ಈಗಿನ ಶಿಕ್ಷಣ ವ್ಯವಸ್ಥೆಗೆ, ವಿದ್ಯಾರ್ಥಿ ಯುವಜನರಿಗೆ ಮತ್ತು ಶಿಕ್ಷಕರಿಗೂ ಅನಿವಾರ್ಯ.
          ಜಾಗತೀಕರಣ, ನಗರೀಕರಣದಿಂದ ಬದಲಾದ ಔದ್ಯಾಗಿಕ ವ್ಯವಸ್ಥೆ ದುಡಿಯುವ ವರ್ಗವನ್ನ ವಿಭಜಿಸಿರುವುದಲ್ಲದೆ ವಿಶ್ರಾಂತಿ ರಹಿತ ಮತ್ತು ಅತಿಯಾದ ಒತ್ತಡದ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ಸ್ಥಿತಿಯನ್ನ ತಂದಿರಿಸಿದೆ. ಇಂತಹ ಹಠಾತ್ ಬವಣೆಗಳಿಂದ ಹೊರಬರಲು, ಚೈತನ್ಯಶೀಲರಾಗಲು ದುಡಿಯುವ ಮಂದಿ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಒತ್ತಡಮಯ ದಿನಚರಿ ದುಡಿಯುವ ಜನರ ಮಾನಸಿಕ ನೆಮ್ಮದಿಯನ್ನು ಕಸಿದುಕೊಂಡು ಮನೋವೃದ್ಧರನ್ನಾಗಿಸಿ ಲವಲವಿಕೆಯ ಉತ್ಸಾಹಿ ಬದುಕನ್ನು ಕುಂಠಿತಗೊಳಿಸಿದೆ. ವಯೋವೃದ್ಧರಲ್ಲಿರುವ ಜೀವನೋತ್ಸಾಹ, ಸುಂದರವಾಗಿ ಬದುಕಬಲ್ಲ ಛಲ ಇಂದಿನ ಐಟಿ, ಬಿಟಿ ಕಂಪೆನಿಗಳಲ್ಲಿ ಕೆಲಸಮಾಡುತ್ತಿರುವ ಯುವ ತರುಣರಲ್ಲಿ ಕಾಣಸಿಗುವುದಿಲ್ಲ! ಇಂತಹ ಬಹುಸಂಖ್ಯಾತ ದುಡಿಯುವ ವರ್ಗಕ್ಕೆ ಈ ಅಹಿತಕರ ವಾತಾವರಣದಿಂದ ಹೊರಬರಲು ರಂಗಭೂಮಿಯೇ ದಿವ್ಯೌಷಧ. ಒತ್ತಡಕ್ಕೊಳಗಾದ ಮನಸ್ಸನ್ನು ಚಿಗುರಿಸಲು, ಕ್ರಿಯಾಶೀಲವಾಗಿಸಲು ರಂಗಚಟುವಟಿಕೆಗಳು ಸಹಕಾರಿ. ರಂಗಭೂಮಿಯಲ್ಲಿ ತೊಡಗಿಕೊಳ್ಳುವುದರಿಂದ ಮನೋ ಸಂಕೀರ್ಣತೆ ಮತ್ತು ಮಾನಸಿಕ ಒತ್ತಡಗಳು ಮಾಯವಾಗಿ ತಿಳಿಯಾದ, ಆಹ್ಲಾದಕರವಾದ ಮನಸ್ಥಿತಿ ನಿರ್ಮಾಣವಾಗುವುದಲ್ಲದೆ ಇನ್ನಷ್ಟು ಉತ್ಸಾಹಿಗಳಾಗಿ ಆರೋಗ್ಯವಂತ ಬದುಕನ್ನು ಸಾಗಿಸಲು, ಆ ಮೂಲಕ ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಚೇತೋಹಾರಿಯಾಗಿಡಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ದುಡಿಯುವ ವರ್ಗದಲ್ಲಿರುವ ತಾರತಮ್ಯವನ್ನ ಹೋಗಲಾಡಿಸಿ, ಸಮಾನತೆ ಮತ್ತು ಸಹಬಾಳ್ವೆಯನ್ನು ರೂಢೀಗೊಳಿಸಿ ಆ ಮೂಲಕ ಹೆಚ್ಚಿನ ಉತ್ಪಾದನೆಯನ್ನ ಪಡೆಯಲೂ ಕೂಡ ರಂಗ ಚಟುವಟಿಕೆಗಳು ಪೂರಕ.
          ದಿನೆ ದಿನೆ ಹೆಚ್ಚುತ್ತಿರುವ ಹಿಂಸಾತ್ಮಕ ಕೃತ್ಯಗಳು, ಕೊಲೆ, ಸುಲಿಗೆ, ಅತ್ಯಾಚಾರ ಮುಂತಾದ ತಲ್ಲಣಗಳು ಇಡಿ ಸಮಾಜದ ಆರೋಗ್ಯವನ್ನು ಕೆಡಿಸುವ ವಿಷಜಂತುಗಳಾಗಿವೆ. ಇವೆಲ್ಲಕ್ಕೂ ಮೂಲ ಕಾರಣ ವ್ಯಕ್ತಿಯ ಮಾನಸಿಕ ಸ್ಥಿಮಿತಿಯ ಕೊರತೆ ಮತ್ತು ಅಸಮತೋಲನ. ತನ್ನ ದೌರ್ಬಲ್ಯಗಳನ್ನ, ತನ್ನೊಳಗಿನ ಹತಾಶೆ, ಉದ್ವೇಗ, ಕೊಳ್ಳುಬಾಕತನ, ದುರಾಸೆ, ಉದಾಸೀನ ಮುಂತಾದ ಆಘಾತಕಾರಿ ಭಾವಗಳನ್ನ ಹತೋಟಿಯಲ್ಲಿಡಲಾರದ ವ್ಯಕ್ತಿ ಸಮಾಜಕ್ಕೆ ಮುಳುವಾಗುತ್ತಾನೆ; ತನ್ನ ದೌರ್ಬಲ್ಯಗಳನ್ನ ಮರೆಮಾಚಲು, ಅವುಗಳಿಂದ ಹೊರಬರಲು ಅನೈತಿಕ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುತ್ತಾನೆ. ಆದರೆ ಅದೇ ವ್ಯಕ್ತಿ ರಂಗ ಚಟುವಟಿಕೆಗಳಲ್ಲಿ ತೊಡಗಿದಾಗ ಆತ ಸಹನೆ, ವ್ಯವಧಾನ, ಆತ್ಮಸ್ಥೈರ್ಯಗಳನ್ನ ಬೆಳೆಸಿಕೊಳ್ಳುತ್ತಾನೆ. ಪರರೊಂದಿಗೆ ಹೊಂದಿಕೊಂಡು ಬಾಳುವ ಆನಂದದ ಅರಿವಾಗಿ ತನ್ನ ಸಮಾಜದೊಂದಿಗೆ, ಪರಿಸರದೊಂದಿಗೆ ಒಂದಾಗಲು ಹವಣಿಸುತ್ತಾನೆ. ಅಭಿನಯದ ಭಾಗವಾಗಿ ತನ್ನೊಳಗಿನ ಭಾವಗಳನ್ನು, ಅನುಭವಗಳನ್ನು, ಸಂವೇದನೆಗಳನ್ನು ನಿಯಂತ್ರಿಸುವ ಹಾಗೂ ಅವುಗಳನ್ನು ಸರಿಯಾದ ಪ್ರಮಾಣ ಮತ್ತು ರೀತಿಯಲ್ಲಿ ಸಮರ್ಪಕವಾಗಿ ಬಳಸುವುದನ್ನ ರೂಢಿಸಿಕೊಳ್ಳುತ್ತಾನೆ. ಈ ಸಂಕೀರ್ಣ ಕ್ರಿಯೆ ಆತನನ್ನ ಒಳ್ಳೆಯ ನಟನನ್ನಾಗಿಸುವುದಲ್ಲದೆ ಉತ್ತಮ ವ್ಯಕ್ತಿಯನ್ನಾಗಿ ಮಾರ್ಪಡಿಸುತ್ತದೆ. ನಾಟಕಗಳ ಮೂಲಕ ಬೆಳೆದ ಭೌದ್ಧಿಕತೆ ಆತನಲ್ಲಿ ವಿವೇಚನೆ, ಯೋಚಿಸುವ ಗುಣಗಳನ್ನು ಪ್ರಚೋದಿಸುತ್ತದೆ. ರಂಗಭೂಮಿ ಕಲಿಸಿದ ನಾಯಕತ್ವದ ಗುಣಗಳು ಎಂತಹದೇ ಸಮಸ್ಯೆ ಬಂದಾಗ ಎದೆಗುಂದದೆ ಧೈರ್ಯದಿಂದ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮಾಡುತ್ತವೆ. ಶೃಮಿಕ ಪರಂಪರೆಯ ರಂಗಭೂಮಿ ಕಷ್ಟಸಹಿಷ್ಣುತೆ ಮತ್ತು ಮೈ ಬಗ್ಗಿಸಿ ದುಡಿಯುವುದನ್ನ ರೂಢಿಸುವುದಲ್ಲದೆ ನಮ್ಮೊಳಗಿನ ಜಾಡ್ಯವನ್ನು ಕಿತ್ತೆಸೆಯುತ್ತದೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಮುಂದಿನ ನಾಗರೀಕರಾದ ಯುವಜನತೆ ಮತ್ತು ಹದಿಹರೆಯದ ಮನಸ್ಸುಗಳನ್ನು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮುಂದೊಮ್ಮೆ ಸಂಭವಿಸಬಹುದಾದ ದುರಂತಗಳನ್ನ ಚಿಗುರಿನಲ್ಲೇ ಬೇರುಸಹಿತ ಹೋಗಲಾಡಿಸಲು ಸಾಧ್ಯ. ಹಾಗಾಗಿ ಉತ್ತಮ ನಾಗರೀಕ ಸಮಾಜದ ನಿರ್ಮಾಣ ರಂಗಭೂಮಿಯ ಮೂಲಕವೇ. ಪ್ರಬುದ್ಧ ನಾಗರೀಕ ಸಮಾಜ ಮಾತ್ರವೇ ರಾಜಕೀಯ ಬದಲಾವಣೆ ತರಲು ಶಕ್ಯವಾಗಿರುವುದು. ಆಳುವ ವರ್ಗದ ಕೊಳ್ಳುಬಾಕತನ, ಭ್ರಷ್ಟತೆಯನ್ನು ನಾಶಮಾಡಲು ನಮ್ಮ ಸಮಾಜ ಭೌದ್ಧಿಕವಾಗಿ ಎಚ್ಚೆತ್ತುಕೊಳ್ಳಬೇಕಿದೆ.
          ನಮ್ಮ ಸಮಾಜದಲ್ಲಿ ಸಾವಿರಾರು ಸಂಘಗಳಿವೆ; ಆದರೆ ಸಂಘಟನೆಗಳಿಲ್ಲ. ದಿನ ನಿತ್ಯ ಒಂದಲ್ಲ ಒಂದು ಹೋರಾಟ ನಡೆಯುತ್ತಲೆ ಇರುತ್ತದೆ; ಆದರೆ ಚಳುವಳಿಗಳು ಹುಟ್ಟುತ್ತಿಲ್ಲ. ಇದು ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆಯ ಪರಿಣಾಮವೂ ಹೌದು. ಹಾಗಾಗಿ ಎಂತಹ ರಂಗಭೂಮಿ ಈ ಕಾಲಮಾನದಲ್ಲಿ ನಮಗೆ ಬೇಕಾಗಿರುವುದು?
          ಇಂದಿನ ನಾಟಕ ರೆಪರ್ಟರಿಗಳು ಸೀಮಿತ ಪ್ರೇಕ್ಷಕರನ್ನು ಹೊಂದಿವೆಯೆ ಹೊರತು ಹೊಸ ಪ್ರೇಕ್ಷಕರನ್ನು, ರಂಗಾಸಕ್ತರನ್ನುಮತ್ತು ಯುವಜನತೆಯನ್ನು ನಾಟಕಗಳತ್ತ ಸೆಳೆಯುವ ಕೆಲಸ ಪ್ರಬಲವಾಗಿ ಮಾಡುತ್ತಿಲ್ಲ. ರಂಗಭೂಮಿಯನ್ನು ಗಂಭೀರವಾಗಿ ಅಥವಾ ವೃತ್ತಿಯಾಗಿ ಸ್ವೀಕರಿಸಲು ಯುವಜನತೆಯೂ ಮುಂದಾಗುತ್ತಿಲ್ಲ. ವೃತ್ತಿರಂಗಭೂಮಿಯಲ್ಲಿನ ಅನಿಶ್ಚಿತತೆ ಇದಕ್ಕೆ ಒಂದು ಕಾರಣವಾದರೆ ಇದಕ್ಕೂ ಮಿಗಿಲಾಗಿ ಯುವಕರಲ್ಲಿ ಮನೆಮಾಡಿರುವ, ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಕಷ್ಟ ಪಡದೆ ತಕ್ಷಣವೇ ಯಶಸ್ಸು ಪಡೆಯುವ ಆಸೆ ಮತ್ತು ಉದಾಸೀನತೆ ಅವರನ್ನ ರಂಗಭೂಮಿಯಿಂದ ವಿಮುಖಗೊಳಿಸಿದೆ ಮಾತ್ರವಲ್ಲದೆ ಸಿನೆಮಾ ಮತ್ತು ಕಿರುತೆರೆಯ ಕಡೆಗೆ ಕೊಂಡೊಯ್ಯುತ್ತಿದೆ. ರಿಯಾಲಿಟಿ ಶೋ ಮತ್ತು ಸಿನೆಮಾ ಜಗತ್ತಿನ ಅತಿರಂಜನೆ, ವಿಜೃಂಭಣೆಗಳು ಅತ್ಯಾಕರ್ಷಕವಾಗಿ ಕಂಡು, ಅವು ಯುವಕರನ್ನು ಮರುಳು ಮಾಡುತ್ತಿವೆ. ಈ ಅತಿಯಾದ ಉತ್ಪ್ರೇಕ್ಷೆಯ ಮರೆಯಲ್ಲಿ ಅಲ್ಲಿನ ಅಸ್ಥಿರತೆ, ಗೊಂದಲಮಯ ಬದುಕು, ದುರಂತಗಳು ಯುವಕರ ಕಣ್ಣಿಗೆ ಕಾಣುತ್ತಿಲ್ಲ. ಯಾವುದೆ ಸಿದ್ಧತೆಗಳಿಲ್ಲದೆ, ಸರಿಯಾದ ಗುರಿ ಮತ್ತು ಅಡಿಪಾಯವಿಲ್ಲದೆ ಆತುರಾತುರವಾಗಿ ಸಿನೆಮಾ ಜಗತ್ತಿಗೆ ಜಿಗಿಯುತ್ತಾರೆ; ಅಷ್ಟೆ ಬೇಗ ನೆಲಕಚ್ಚುತ್ತಾರೆ. ಇಂತಹ ಸಂದರ್ಭದಲ್ಲಿ ರೆಪರ್ಟರಿಗಳು ಅಥವಾ ರಂಗಶಾಲೆಗಳು ಏನುತಾನೆ ಮಾಡಬಲ್ಲವು!? ಹಾಗಾಗಿ ಮೂಲೆ ಮೂಲೆಯಲ್ಲಿ ಹುಟ್ಟಿಕೊಂಡು ಕಾರ್ಯ ಪ್ರವೃತ್ತರಾಗಿರುವ ಹವ್ಯಾಸಿ ರಂಗತಂಡಗಳು ಇದನ್ನು ಮೀರಿ ಪರ್ಯಾಯವಾಗಿ ಬೆಳೆಯಬೇಕಿದೆ. ಸ್ಥಳೀಯ ಸಂಪನ್ಮೂಲಗಳನ್ನು ಕಲೆಹಾಕಿ, ಒಂದಿಷ್ಟು ವಿದ್ಯಾರ್ಥಿಗಳನ್ನು, ಯುವಜನರನ್ನು, ದುಡಿಯುವ ವರ್ಗದವರನ್ನು ಒಂದೆಡೆ ಸೇರಿಸಿ ರಂಗಚಟುವಟುಕೆ, ನಾಟಕಗಳ ಮೂಲಕ ಅವರನ್ನ ಜಾಗೃತಗೊಳಿಸುವ ಅಗತ್ಯವಿದೆ. ಅವರಲ್ಲಿ ಸದಭಿರುಚಿ, ವೈಚಾರಿಕತೆ ಮತ್ತು ಭೌದ್ಧಿಕ ಪ್ರಜ್ಞೆಯನ್ನು ಬೆಳೆಸಲೇ ಬೇಕಾಗಿದೆ. ಕೇವಲ ಭೌದ್ಧಿಕತೆ, ವಿಚಾರಪರತೆ ಮಾತ್ರವಲ್ಲದೆ ತನ್ನೆಲ್ಲಾ ಪರಿಧಿಯನ್ನ ಮೀರಿ ವೃತ್ತಿ ರಂಗಭೂಮಿಯ ಶಿಸ್ತು, ಪ್ರಯೋಗಶೀಲತೆ, ವೃತ್ತಿಪರತೆ, ಜಾನಪದ ರಂಗಭೂಮಿಯ ಚೈತನ್ಯವನ್ನೂ ಅಳವಡಿಸಿಕೊಳ್ಳಬೇಕಾಗಿದೆ. ಅತಿಯಾಗಿ ಭಾವುಕರೂ ಆಗದೆ, ವಿಚಾರಗಳಲ್ಲಿ ಕಳೆದೂ ಹೋಗದೆ; ಭಾವ ಮತ್ತು ಭೌದ್ಧಿಕತೆಯ ಹದವಾದ ಮಿಶ್ರಣಕ್ಕೆ ವೃತ್ತಿಪರತೆ ಮತ್ತು ಪ್ರಯೋಗಶೀಲತೆಯ ಲೇಪಕೊಟ್ಟಾಗ ಈ ಹವ್ಯಾಸಿ ರಂಗಭೂಮಿ ಬಲಿಷ್ಠ ಮತ್ತು ಪ್ರಭಾವಿ ಮಾಧ್ಯಮವಾಗಬಲ್ಲದು. ಯುವಕರಲ್ಲಿ ಓದುವ ಹವ್ಯಾಸ ಬೆಳೆಸುವ ಮೂಲಕ ಭೌದ್ಧಿಕತೆಯನ್ನೂ, ಸ್ಪಷ್ಟವಾಗಿ ಮಾತನಾಡಲು ಹಾಗೂ ಅಭಿನಯಿಸಲು ಶಾಸ್ತ್ರೀಯವಾಗಿ ಸಿದ್ಧಗೊಳಿಸುವ ಮೂಲಕ, ಸಮಯಪಾಲನೆ ಮತ್ತು ಶಿಸ್ತನ್ನು ಬೆಳೆಸುವ ಮೂಲಕ ವೃತ್ತಿಪರತೆಯನ್ನೂ; ಸಮಾಜಮುಖಿ ಚಿಂತನೆ, ರಚನಾತ್ಮಕ ಚಟುವಟಿಕೆ ಮತ್ತು ಗೃಹಿಕೆಯನ್ನು ಸಾಣೆ ಹಿಡಿಯುವ ಮೂಲಕ ಪ್ರಯೋಗಶೀಲತೆಯನ್ನು ಬೆಳೆಸುವ ಮತ್ತು ಎಲ್ಲವನ್ನು ಮುರಿದು ಹೊಸದಾಗಿ ಕಟ್ಟುವ ಕೆಲಸವನ್ನು ಎಲ್ಲಾ ಹವ್ಯಾಸಿ ತಂಡಗಳು, ವೃತ್ತಿ ಕಲಾವಿದರು, ರಂಗಶಾಲೆಗಳು ಮಾಡಲೇ ಬೇಕಿದೆ. ಚಳುವಳಿ, ಸಂಘಟನೆಗಳು ಇಲ್ಲವಾದರೂ ಅವುಗಳಿಗೂ ಮಿಗಿಲಾಗಿ, ಇನ್ನೂ ಪ್ರಭಾವಶಾಲಿಯಾಗಿ ಬೆಳೆಯಬಹುದಾದ ಸಾಧ್ಯತೆ ಚಿಕ್ಕ-ದೊಡ್ಡ ರಂಗತಂಡಗಳಿಗಿವೆ. ಈ ತಂಡಗಳು ತಮ್ಮ ಇತಿಮಿತಿಯಲ್ಲಿ ಮಾಡುತ್ತಿರುವ ರಂಗಕಾಯಕ ಮುಂದೊಂದು ದಿನ ಇಡಿ ಸಮಾಜವನ್ನೇ ಬದಲಿಸಬಲ್ಲ, ಮುನ್ನೆಡೆಸಬಲ್ಲ ತೀಕ್ಷ್ಣ ಶಕ್ತಿಯಾಗಬಲ್ಲದು. ರಂಗಭೂಮಿ ಅಂತಹ ಒಂದು ಪರ್ಯಾಯ ಶಕ್ತಿಯಾಗಲೇ ಬೇಕಿದೆ. ಅದು ಈ ಸಮಾಜದ ಅನಿವಾರ್ಯ. ರಂಗಭೂಮಿ ಚಿರಾಯು....!

2 comments: