Apr 20, 2013

ಒಡೆದು ಆಳುವ ನೀತಿ ಮತ್ತು ರಂಗಭೂಮಿ

              'ಒಡೆದು ಆಳುವ ನೀತಿ' ಎನ್ನುವ ಪದ ಕೇಳಿದಾಕ್ಷಣ ಸ್ವಾತಂತ್ರ್ಯೋತ್ತರ ಭಾರತೀಯರಾದ ನಮಗೆ ನೆನಪಾಗುವುದು ನಾವು ಕಂಡರಿಯದ ಬ್ರಿಟಿಷರ ದಬ್ಬಾಳಿಕೆ ಮತ್ತು ರಾಜತಾಂತ್ರಿಕ ಆಡಳಿತ ವ್ಯವಸ್ಥೆ. ಪ್ರಾಥಮಿಕ ಕಂತದ ಶಿಕ್ಷಣದಲ್ಲಿಯೆ ನಾವು ಓದಿದ್ದೇವೆ- "ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯಿಂದ ಭಾರತವನ್ನು ವಶಪಡಿಸಿಕೊಂಡರು...."
ಹಾಗಾಗಿ ಒಡೆದು ಆಳುವ ನೀತಿಯ ಕುರಿತು ಹೊಸದಾಗಿ ಹೇಳುವುದೇನು ಇಲ್ಲ.  ಆದರೆ ಇದು ಕೇವಲ ಬ್ರಿಟಿಷರಿಗೆ ಸೀಮಿತವಾಗಿಲ್ಲ. ಅಂದಿನ ವಸಾಹತುಶಾಹಿ ಬ್ರಿಟಿಷರ ಅಪರಾವತಾರದಂತಿರುವ ಇಂದಿನ ಸಾಮ್ರಾಜ್ಯಶಾಹಿ ಅಮೇರಿಕಾದ ದೊಡ್ಡಣ್ಣ ಜಾಗತೀಕರಣ ಮತ್ತು ಅಭಿವೃದ್ಧಿಯ ಹಸರಿನಲ್ಲಿ ಮಾಡುತ್ತಿರುವುದೂ ಅದೆ. ಜಾಗತೀಕರಣದ ಮೂಲಕ ಇಡಿ ಜಗತ್ತು ಮಾನವನ ಅಂಗೈಯಲ್ಲಿರುವ ನೆಲ್ಲಿಕಾಯಿ ಎಂದು ಬಿಂಬಿಸುತ್ತಿದೆ ಆ ಅಮೇರಿಕಾ. ಜಾಗತೀಕರಣದ ಕೂಸಾದ ಐಟಿ ಬಿಟಿ ಕಂಪೆನಿಗಳಲ್ಲಿ, ಕಾಲ್ ಸೆಂಟರ್ ಗಳಲ್ಲಿ ಸಾವಿರ ಲಕ್ಷಾಂತರ ಜನರು ಕೆಲಸ ಮಾಡುತ್ತಾರೆ. ಆದರೆ ಒಬ್ಬರಿಗೂ ತಮ್ಮ ಪಕ್ಕದ ಚೆಂಬರ್ ನಲ್ಲಿ ಯಾರಿದ್ದಾರೆ ನಮ್ಮ ಸಹೋದ್ಯೋಗಿಗಳು ಯಾರು ಎನ್ನುವುದು ಗೊತ್ತೆ ಇರುವುದಿಲ್ಲ. ಆದರೆ ಕೆಲವು ಷರ್ಷಗಳ ಹಿಂದೆ ಪ್ರಬಲವಾಗಿದ್ದ ಕಾರ್ಖಾನೆಗಳ ಪರಿಸ್ಥಿತಿಯೇ ಬೇರೆ. ಪ್ರತಿಯೊಬ್ಬ ಕಾರ್ಮಿಕನಿಗೂ ಇನ್ನೊಬ್ಬ ಪರಿಚಿತ-ಆಪ್ತ ಸ್ನೇಹಿತ. ಯಾರಿಗಾದರು ತೊಂದರೆ ಆಗಲಿ ಇಡಿ ಕಾರ್ಮಿಕ ಸಂಘಟನೆ ಅವನಿಗೆ ಹೆಗಲು ಕೊಡುವಷ್ಟು ಐಕ್ಯತೆ. ಆದರೆ ಜಾಗತೀಕರಣದಿಂದ ಕಾರ್ಖಾನೆಗಳ ಸ್ಷರೂಪ ಬದಲಾಗಿದೆ. ಇಂದು ಸಂಘಟನೆಗಳಿಲ್ಲ. ಚಳುವಳಿಗಳೂ ನಡೆಯುತ್ತಿಲ್ಲ.  ಇದಕ್ಕೆ ಮುಖ್ಯ ಕಾರಣ ಜಾಗತೀಕರಣ. ಜಾಗತೀಕರಣದ ಒಡೆದು ಆಳುವ ನೀತಿ.

             ಜಗತ್ತಿನ ಯಾವುದೇ ವ್ಯವಸ್ಥೆಯನ್ನು ಗಮನಿಸಿ; ಅದು ರಾಜಕೀಯ, ಶಿಕ್ಷಣ, ಉದ್ಯೋಗ, ಆಡಳಿತ, ಪತ್ರಿಕೋದ್ಯಮ ಏನೇ ಇರಲಿ ಎಲ್ಲೆಡೆಯೂ ಒಡೆದು ಆಳುವ ನೀತಿ ಒಗ್ಗಿಕೊಂಡಿದೆ. ಸಮಾಜವನ್ನು ಕೈಹಿಡಿದು ಮುನ್ನೆಡಸಬೇಕಿದ್ದ ಪತ್ರಿಕಾರಂಗ ಇಂದು ಉದ್ಯಮವಾಗಿ ಮಾರ್ಪಟ್ಟಿದೆ. ಸಾಮಾಜಿಕ ಅಸಮಾನತೆಯನ್ನ ಹೋಗಲಾಡಿಸಿ ಎಲ್ಲರನ್ನು ಒಂದುಗೂಡಿಸಬೇಕಿದ್ದ ಪತ್ರಿಕೆಗಳೇ ಸಮಾಜವನ್ನ ಒಡೆಯುತ್ತಿದೆ. ರಾಜಕೀಯ ಪಕ್ಷಗಳ, ಬೇರೆ ಬೇರೆ ಸಂಸ್ಥೆಗಳ ಮುಖವಾಣಿಯಂತೆ ವರ್ತಿಸುತ್ತಿವೆ. ಇತರೆ ಎಲ್ಲಾ ಕ್ಷೇತ್ರಗಳು ಇದೇ ರೀತಿ ರಾಜಕೀಯದ ಅಡಿಯಾಳಾಗಿವೆ. ಪರೋಕ್ಷವಾಗಿ ಜಾಗತಿಕರಣದ ತಾಳಕ್ಕೆ ಹೆಜ್ಜೆ ಹಾಕುತ್ತಿವೆ.

             ಆದರೆ ಇದೆಲ್ಲದಕ್ಕೂ ವಿಭಿನ್ನವಾಗಿ, ವ್ಯತಿರಿಕ್ತವೆನ್ನುವಂತೆ ಯಾವುದಾದರು ಕ್ಷೇತ್ರವಿದ್ದರೆ ಅದು ರಂಗಭೂಮಿ ಮಾತ್ರ. ರಂಗಭೂಮಿಯ ಮೂಲಗುಣವೇ ಇತರ ಕ್ಷೇತ್ರಗಳಿಗೆ ತದ್ವಿರುದ್ಧವಾದುದು. ಬೇರೆ ಬೇರೆ ವಯೋಮಾನದ, ಸ್ವಭಾವದ, ವರ್ಗದ, ಭಾಷೆಯ, ಜಾತಿಯ, ಪಂಗಡದ ಜನರನ್ನು ಯಾವುದೇ ತಾರತಮ್ಯವಿಲ್ಲದೆ ಒಂದುಗೂಡಿಸಿ ಒಂದೇ ಗುರಿಯನ್ನು ತಲುಪಲು ದುಡಿಸಿಕೊಳ್ಳುವ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ಒಂದು ನಾಟಕ ಸಿದ್ಧವಾಗಲು ಹತ್ತು ತಲೆಗಳು, ಇಪ್ಪತ್ತು ಕೈಗಳು ಮತ್ತು ಸಾವಿರ ಮನಸ್ಸುಗಳು ಒಂದಾಗಲೇ ಬೇಕು. ಆಗ ಮಾತ್ರ ಒಂದು ತಂಡ ಹುಟ್ಟುತ್ತದೆ. ಆ ಮೂಲಕ ಸಮಾಜಮುಖಿ ಚಿಂತನೆ-ಚಳವಳಿ ಬೆಳೆಯುತ್ತದೆಯೆ ವಿನಃ ಯಾರೋ ಒಬ್ಬ ನಿಂತು ಪುಂಕಾನುಪುಂಕ ಭಾಷಣ ಬಿಗಿಯುವುದರಿಂದಲ್ಲ. ರಂಗಭೂಮಿಯ ಯಾವುದೇ ಸ್ಥರದಲ್ಲಿ ತೊಡಗಿಕೊಂಡು ಕೆಲಸ ಮಾಡಿದರೂ ಎಲ್ಲರ ಉದ್ದೇಶ, ಧ್ಯೇಯ ಒಂದೆ. ಈ ಕಾರಣಕ್ಕಾಗಿ ರಂಗಭೂಮಿ ಒಂದು ಚಳುವಳಿಯಾಗಿರುವುದು, ಪ್ರತಿಭಟನೆಯ ಪ್ರಬಲ ಮಾಧ್ಯಮವಾಗಿರುವುದು ಮತ್ತು ಮನುಷ್ಯ ಮನುಷ್ಯರ ನಡುವಿನ ಸಂಬಂಧ ಬೆಸೆಯುವ, ಮನಸ್ಸು ಕಟ್ಟುವ ಪ್ರಖರ ಅಸ್ತ್ರವಾಗಿರುವುದು.

             ಇದನ್ನು ಗಮನಿಸಿರುವ ಜಾಗತೀಕರಣದ ಕಾಣದ ಕೈಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ರಂಗಭೂಮಿಯಲ್ಲೂ ತನ್ನ ಸ್ವಾಯತ್ತ ಬೆಳೆಸಿಕೊಳ್ಳಲು ಪ್ರಾರಂಭಿಸಿದೆ. ಅದಕ್ಕೆ ಉದಾಹರಣೆ ಸಣ್ಣ ಹಳ್ಳಿಯಲ್ಲೂ ಸೇರಿದಂತೆ ಬೃಹತ್ ನಗರಗಳಲ್ಲಿ ರಂಗಚರ್ಯದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ. ರಂಗಭೂಮಿಗೆ ವೃತ್ತಿಪರತೆ ಬೇಕೇ ಹೊರತು ಯಾಂತ್ರಿಕತೆಯ ವ್ಯಾಪಾರಿ ಮನೋಧರ್ಮವಲ್ಲ. ರಂಗಕಲಾವಿದರು ಅಧ್ಯಯನಶೀಲರಾಗಿ, ಕೂಪ ಮಂಡೂಕರಾಗದೆ, ಸದಾ ಕ್ರಿಯಾಶೀಲರಾಗಿ, ಹರಿಯುವ ನೀರಾಗಬೇಕೇ ಹೊರತು ನಿಂತನೀರಾಗಬಾರದು. ಆಗ ಮಾತ್ರ ರಂಗಭೂಮಿಯ ಸಮಾಜಮುಖಿ ಚಿಂತನೆಯ ಹರಿವು ಹೆಚ್ಚಿ ಚಳುವಳಿಯ ರೂಪ ಪಡೆಯುತ್ತದೆ ಮತ್ತು ತನ್ಮೂಲಕ ಜಾಗತೀಕರಣದಿಂದ ಒಡೆಯುತ್ತಿರುವ ಮನಸ್ಸುಗಳಿಗೆ ಚೈತನ್ಯ ತುಂಬಿ ಒಂದುಗೂಡಿಸಲು ಸಾಧ್ಯವಾಗುತ್ತದೆ.

6 comments:

 1. ಅಬ್ಬ! ರಂಗಭೂಮಿಯ ಸಂಘಟನೆಯಲ್ಲಿ ಆಗುತ್ತಿರುವ ಅತೀ ಸೂಕ್ಷ್ಮ ತೊಂದರೆಯನ್ನು 'ಜಾಗತಿಕ' ಎಂದು ಹೆಸರಿಸಿ ಎಷ್ಟು ಚೆನ್ನಾಗಿ ಹೇಳಿದ್ದೀರಿ ಮೇಘಾ..... TV ಹಾಗು ಸಿನೆಮಾ ಈ ಎರಡೂ ಕ್ಷೇತ್ರಗಳು ರಂಗಭೂಮಿ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂಬುದನ್ನು ಹಾಗು ಅದರಿಂದ ರಂಗಭೂಮಿಗೆ ಆಗುತ್ತಿರುವ ತೊಂದರೆಗಳನ್ನು ಅತ್ಯಂತ ಚೆನ್ನಾಗಿ ವಿಶ್ಲೇಷಿಸಿದ್ದೀರಿ... Hats off ನಿಮಗೆ.. ನಿಮ್ಮ ದೊಡ್ಡ ಅಭಿಮಾನಿ ಆಗಿಬಿಟ್ಟೆ ನಾನು...

  ReplyDelete
  Replies
  1. ತುಂಬು ಹೃದಯದ ಧನ್ಯವಾದ ಸಿರೀಶ್ :)

   Delete
 2. ಬಹಳ ಚೆನ್ನಾಗಿ ಬರೆದಿದ್ದೀರಿ ....

  ReplyDelete
 3. nijavagiyu indina prachalita ghatanegalannu arthapoornavagi tilisiddeera, bahala chennagide, rangabhumiya apara shaktiya bagge tilisidakke dhanyavadagalu

  Prajwal Bharadwaj

  ReplyDelete