Mar 31, 2013

ಒಂದು ರಾತ್ರಿಯ ಕನಸು











ಎಷ್ಟು ಹುಡುಕಿದರು ಸಿಗಲೆ ಇಲ್ಲ
ಕಳೆದುಕೊಂಡ ನಕ್ಷತ್ರ
ಎಷ್ಟು ಕೇಳಿದರು ಹೇಳಲೆ ಇಲ್ಲ
ಆಗಸವೆಷ್ಟು ವಿಚಿತ್ರ

ಅಂದು ರಾತ್ರಿ ರಜೆ ಹಾಕಿದ
ನಿತ್ಯ ಬರುತ್ತಿದ್ದ ಚಂದ್ರ
ಆಕಾಶವೆಂಬ ಚಂದದ ಕಾಗದ
ಆಗಿತ್ತು ಕಪ್ಪು ರಂಧ್ರ

ಮನೆಯಂಗಳದಲಿ ಕೂತಿದ್ದ ಮಗು
ನೋಡುತ್ತಿತ್ತು ನೀಲಾಕಾಶ
ಕೇಳಿದಾಗ ಅಮ್ಮನ ಕೂಗು
ಅಂಬರದಲ್ಲೊಂದು ತಾರಾನಾಶ

ಚಾಚಿದ ಕಪ್ಪು ಪರದೆಯ ಮುಂದೆ
ನಡೆದಿತ್ತು ನಕ್ಷತ್ರ ಯುದ್ಧ
ಆ ಮಗು ಅಡಗಿ ಅಮ್ಮನ ಹಿಂದೆ
ನೋಡುತಲಿದ್ದಾಗ ತಾರೆಯೊಬ್ಬ ಬಿದ್ದ

ಮಗುವಿನ ಮುಗ್ಧತೆ ಆಶ್ಚರ್ಯಗೊಂಡು
ನೋಡಿತು ನಕ್ಷತ್ರಗಳ ಜಗಳ
ಅಮ್ಮನು ಮಗುವ ಅಪ್ಪಿಕೊಂಡು
ಹಾಡಿದಳು ಜೊಜೊ ಜೋಗುಳ

ತಾರಾಗಣದ ಕಥೆಯನು ಕೇಳುತಾ
ಮಲಗಿತು ಮಗು ಅಮ್ಮನ ತೋಳಿನಲಿ
ನಿದ್ದೆಗೆ ಜಾರಿತು ನೋಡುನೋಡುತಾ
ಯುದ್ಧ ನಡೆದೇ ಇತ್ತು ಕನಸಿನಲಿ

ಬೆಳಗಾಗುತಲೆ ಎದ್ದುಬಂದ
ಬೆಳಕು ಬೀರುತ ಭಾಸ್ಕರ
ಆದರೂ ನಿದ್ದೆಯಲಿ ಗುಣುಗುತಲಿದ್ದ
ಕನಸು ಕಾಣುತ್ತಿದ್ದ ಸುಕುಮಾರ

ಎಚ್ಚರಾಗಿ ಅಮ್ಮನ ಕರೆದು
ಹೇಳಿದ ಕನಸಿನ ಕಥೆಯನ್ನ
ಓಡಿಬಂದಳು ಕೆಲಸವ ತೊರೆದು
ಕೇಳಲು ಮಗುವಿನ ಮಾತನ್ನ

ರಾತ್ರಿ ನಡೆದಿತ್ತು ಭೀಕರ ಯುದ್ಧ
ಸೂರ್ಯ ತಾರೆಯರ ನಡುವೆ
ಚಂದ್ರನು ಹೆದರಿ ಅಡಗಿಕೊಂಡಿದ್ದ
ನೀಲಮೇಘಗಳ ನಡುವೆ

ನಾನೂ ಇದ್ದೆ ಯುದ್ಧದಲ್ಲಿ
ಕನಸಿನ ಯುದ್ಧವ ಗೆದ್ದೆ
ಹೇಳಿತು ಅಮ್ಮನಿಗೆ ಸಂತೋಷದಲ್ಲಿ
ಆದರೆ ಮಗುವಿನ ಚಡ್ಡಿ ಒದ್ದೆ

ಸುಂದರಕನಸು ಮುಗಿಯುತ್ತಿದ್ದಂತೆ
ಎಂಟೆಂದು ಅರಚಿತು ಗಡಿಯಾರ
ತಕ್ಷಣ ಅಮ್ಮ ಎಂದಿನಂತೆ
ಕೊಟ್ಟಳು ಮಗುವಿಗೆ ಲಘು ಉಪಹಾರ

ಶಾಲಾಚೀಲ ಏರಿಸಿಕೊಂಡು
ನಡೆದ ಪುಟ್ಟ ಶಾಲೆಯೆಡೆಗೆ
ವಾಸ್ತವದ ಜಂಜಾಟವ ಕಂಡು
ಕನಸು ಮರೆಯಾಯಿತು ಕಡೆಗೆ

No comments:

Post a Comment