Oct 23, 2011

ಟೀವಿ ನೋಡುವುದನ್ನು ಬಿಟ್ಟು.....?!
         ಅಕ್ಟೋಬರ್ ಬಂತೆಂದರೆ ಅದು ಅಜ್ಜ ಅಜ್ಜಿಯರಿಗೆ ಸಂತಸದ ಸಂದರ್ಭ. ದೂರದೂರಲ್ಲಿ ಓದುತ್ತಿರುವ ಮೊಮ್ಮಕ್ಕಳು, ಮರಿಮಕ್ಕಳು ಮರಳಿ ಗೂಡಿಗೆ ಬರುವ ಸಂತಸ. ಮೌನದ ಗೂಡು ಮಕ್ಕಳ ಕಲರವದಿಂದ ಕೂಡಿದ ಮಾತಿನ ಮನೆಯಾಗುವ ಮಧುರ ಕ್ಷಣ. ಮಕ್ಕಳಿಗೆ ಶಾಲೆಯ ಓದಿನಿಂದ ಕೆಲಕಾಲ ಮುಕ್ತಿ; ಟೀಚರ್ ಗಳ ಬೊಗಳೆಯಿಂದ ಬಿಡುಗಡೆ; ಗೊಂದಲಮಯ ಪ್ರಪಂಚದ ಯಾಂತ್ರಿಕತೆಯಿಂದ ಪ್ರಕೃತಿಯೆಡೆಗೆ ಪಯಣಿಸುವ ಅವಕಾಶ. ಕಾಂಕ್ರೀಟ್ ಕಾಡಿನಿಂದ ಬಹು ದೂರವಿರುವ ಹಸಿರ ಉಸಿರಾದ ಹಳ್ಳಿಯ ಅಜ್ಜ ಅಜ್ಜಿಯನ್ನು ನೋಡುವ ತವಕ. ತಂದೆ ತಾಯಿಯರಿಗೆ ದಿನಾ ಕಾಡುವ ಮಕ್ಕಳಿಂದ, ಮಕ್ಕಳ ಹೋಮ್ ವರ್ಕ್ ನಿಂದ ತಾತ್ಕಾಲಿಕ ನಿವೃತ್ತಿ. ಗಡಿಬಿಡಿಯ ಓಟಕ್ಕೆ ಅಲ್ಪವಿರಾಮ. ಮಕ್ಕಳನ್ನು ರಜೆಯಲ್ಲಿ ಏನು ಮಾಡುವುದು ಎನ್ನುವ ಬಿಕ್ಕಟ್ಟು.

         ಅಕ್ಟೋಬರ್ ಅತ್ತ ಮಳೆಯೂ ನಿಲ್ಲದ, ಗಾಢ ಚಳಿಯೂ ಇಲ್ಲದ ಅಪರೂಪದ ವಾತಾವರಣ. ಭತ್ತದ ಫಸಲು ಸೂರ್ಯ ರಶ್ಮಿಗೆ ಪ್ರಜ್ವಲಿಸುತ್ತಾ ಇರುತ್ತದೆ. ಮಳೆ ಮುಗಿದು ಚಳಿ ಬರುವ ಸಮಯ. ಶಾಲೆಗಳಲ್ಲಿ ಪರೀಕ್ಷೆಗಳೆಲ್ಲಾ ಮುಗಿದು ಮಧ್ಯವಾರ್ಷಿಕ ರಜೆ. ಹಳ್ಳಿ ಹುಡುಗರಿಗೆ ಗುಡ್ಡ ಸುತ್ತುವ, ಮರಕ್ಕೆ ಕಲ್ಲು ಹೊಡೆಯುವ, ದನ-ಕರುಗಳ ಚಾಕರಿ ಮಾಡುವ ಕೆಲಸ. ಅದೇ ಅವರಿಗೆ ಸಂತಸವೂ ಕೂಡ. ಆದರೆ ಪೇಟೆಯಲ್ಲಿರುವ ಪುಟಾಣಿಗಳಿಗೆ ಇದ್ಯಾವುದರ ಪರಿವೇ ಇಲ್ಲ, ಅಜ್ಜ ಅಜ್ಜಿಯರ ಪರಿಚಯವೂ ಇಲ್ಲ, ಹಳ್ಳಿಯಲ್ಲಿ ನಮಗೂ ಒಂದು ಮನೆಯಿದೆ, ಅಲ್ಲಿ ಅಜ್ಜ ಅಜ್ಜಿ ಎನ್ನುವ ಎರಡು ಜೀವಗಳು ನಮಗಾಗಿ ಕಾಯುತ್ತಿರುತ್ತವೆ ಎನ್ನುವ ಕಲ್ಪನೆ ಕೂಡ ಇರುವುದಿಲ್ಲ. ಹಾಗೂ ತಂದೆ ತಾಯಿಯರು ಆ ನೈಜತೆಯನ್ನು ಮಕ್ಕಳಿಗೆ ತಿಳಿಸಿರುವುದೂ ಇಲ್ಲ. ಈ ಪೇಟೆಯ ಮಕ್ಕಳಿಗೆ ರಜೆಯಲ್ಲಿ ಗೊತ್ತಿರುವುದು ಒಂದೇ ಕೆಲಸ. ಅದು ಟಿ.ವಿ. ನೋಡುವುದು. ಅಂಗಡಿಯ ಹಳಸಿದ ತಿಂಡಿಯನ್ನು ತಿನ್ನುತ್ತಾ ಟಿ.ವಿ. ಮುಂದೆ ಕುಳಿತರೆ ಬೇರೆ ಯಾವುದರ ಅರಿವೇ ಇರೋದಿಲ್ಲ. ತಂದೆ ತಾಯಿ ಬರುವುದು ಈ ಮಗು ಮಲಗಿದ ಮೇಲೆ. ಯಾರೂ ಜೊತೆ ಇಲ್ಲದೆ ಏಕಾಂಗಿಯಾಗಿ ಟಿ.ವಿ.ಗೆ ಜೋತು ಬೀಳುವಂತಹ ಈ ಮಕ್ಕಳು ನಿಜವಾದ ಮಕ್ಕಳಲ್ಲ. ಹಾಡದ, ಕುಣಿಯದ, ಇತರರೊಂದಿಗೆ ಆಟವಾಡದ, ಮಾತನಾಡದ ಮಕ್ಕಳು ಹೇಗೆ ಮಕ್ಕಳಾದಾರು? ಅವರು ಕೇವಲ ಯಾಂತ್ರಿಕ ಪ್ರಪಂಚದ ನಟ್ಟು-ಬೋಲ್ಟುಗಳು. ಕಷ್ಟವನ್ನೇ ಕಂಡರಿಯದವರು ಟಿ.ವಿ.ಯೇ ಸರ್ವಸ್ವ ಎಂದು ಕುಳಿತುಬಿಡುತ್ತಾರೆ. ಎಲ್ಲೋ ಕೆಲವು ಮಕ್ಕಳು ಅಲ್ಲಲ್ಲಿ ನಡೆಯುವ ಚಿಣ್ಣರ ಮೇಳ, ರಜಾ-ಮಜಾದಂತಹ ಶಿಬಿರಗಳಿಗೆ ಹೋಗಿ ಹೊಸತನವನ್ನು ಹುಡುಕುತ್ತಾರೆ, ಇನ್ನು ಕೆಲವರು ಕ್ರಿಕೇಟ್ ತರಬೇತಿಗಳಿಗೆ. ಇದೆಲ್ಲದರ ಹೊರತಾಗಿ ಅದೆಷ್ಟೋ ಮಕ್ಕಳು ರಜೆಯಲ್ಲಿ ಹೋಮ್ ವರ್ಕ್ ಮಾಡುತ್ತಾ, ಕೋಚಿಂಗ್ ಕ್ಲಾಸುಗಳಿಗೆ ಹೋಗುತ್ತಾ, ಟಿ.ವಿ. ನೋಡುತ್ತಾ ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಹಳ್ಳಿಯ ಸೊಬಗು, ಸಂತೋಷ, ಪರಿಸರ, ಅಜ್ಜ ಅಜ್ಜಿಯ ಪ್ರೀತಿ ವಾತ್ಸಲ್ಯ, ಅಮ್ಮ ಮಾಡುವ ಬಗೆ ಬಗೆಯ ತಿಂಡಿ, ಸ್ನೇಹಿತರ ಜೊತೆಗಿನ ಆಟ, ಊಟ, ನೋಟ ಹಾಗೂ ರಜೆಯ ಮಜವನ್ನು ಕಸಿದುಕೊಂಡ ಈ ಸಮಾಜ ಪೇಟೆಯ ಮಕ್ಕಳಿಗೆ ಏನು ಕೊಟ್ಟೀತು? ಈ ಮಕ್ಕಳ ತಂದೆ ತಾಯಿಯರು ಇವರಿಗೆ ಅತ್ಯುತ್ತಮ ಭವಿಷ್ಯ ಕಟ್ಟಿಕೊಟ್ಟಾರೆ? ಇಂತಹ ಮಕ್ಕಳು ಜೀವನ ಎನ್ನುವ ಸಾಗರದಲ್ಲಿ ಅಲೆಗಳ ಹೊಡೆತವನ್ನು ತಡೆದುಕೊಳ್ಳುವಷ್ಟು ಸಮರ್ಥರಾದಾರೆ?
         ಇಂತಹ ಮಕ್ಕಳಿಗೆ ಟಿ.ವಿ. ನೋಡುವುದನ್ನು ಬಿಟ್ಟು ಪಾಲಕರು ಏನನ್ನು ಕಲಿಸುತ್ತಿದ್ದಾರೆ? ಅಲ್ಲೋ ಇಲ್ಲೋ ನೂರಕ್ಕೆ ಒಬ್ಬರೋ ಇಬ್ಬರೋ ಮಕ್ಕಳನ್ನು ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಕ್ರೀಡೆ ಮುಂತಾದ ಚಟುವಟಿಕೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ಉಳಿದ ತೊಂಭತ್ತೆಂಟು ಮಂದಿ ಮಾಡುತ್ತಿರುವುದಾದರೂ ಏನು? ಇನ್ನಾದರೂ ಮಕ್ಕಳನ್ನು ಭವಿಷ್ಯದಲ್ಲಿ ಸದೃಢ ವ್ಯಕ್ತಿಯಾಗಿ ರೂಪಿಸಲು, ಉತ್ತಮ ಸಮಾಜ ಕಟ್ಟಲು, ಮನುಷ್ಯರ ನಡುವಿನ ಮನಸ್ಸು ಕಟ್ಟಲು ಎಲ್ಲಾ  ಹೆತ್ತವರು ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತುಕೊಡಲೇ ಬೇಕು. ಇಲ್ಲವಾದರೆ ಕಾಂಕ್ರೀಟ್ ಕಾಡುಗಳಲ್ಲಿರುವ ಮಕ್ಕಳು ತಮ್ಮ ಅಮೂಲ್ಯ ಬಾಲ್ಯವನ್ನು ಕಳೆದುಕೊಂಡು ಕಟ್ಟಡಗಳ ನಡುವೆ ಕಣ್ಮರೆಯಾಗಿಬಿಡುತ್ತಾರೆ!..... ಎಚ್ಚರ.....!!!

No comments:

Post a Comment