Jul 8, 2011

" ಅತಿಥಿ ದೆವ್ವೋ ಭವ!? "

          ಭಾರತ ಸಂಪದ್ಭರಿತ ದೇಶ. ಪುರಾತನ ಸಿಂಧು ನಾಗರೀಕತೆ ಬೆಳೆದು ಬಂದ ರಾಷ್ಟ್ರ. ತನ್ನ ಉದ್ದಗಲಕ್ಕೂ ಬಹಳ ಬೆಲೆ ಬಾಳುವ ಸಂಪನ್ಮೂಲವನ್ನು ಹೊಂದಿರುವ ದೇಶ. ಪಾಶ್ಚ್ಯಾತ್ಯರು ಭಾರತದ ಮೇಲೆ ದಾಳಿ ಮಾಡಿದ್ದು ಇದೇ ಕಾರಣಕ್ಕೆ ಎಂದು ನಮ್ಮ ಇತಿಹಾಸಗಳು ಹೇಳುತ್ತವೆ.
ಮೊಘಲರಿಂದ ಹಿಡಿದು ಬ್ರಿಟಿಷರ ವರೆಗೂ ಎಲ್ಲರೂ ಭಾರತದ ಸಂಪತ್ತನ್ನು ಕೊಳ್ಳೆಹೊಡೆದವರೇ. ಆದರೂ ಭಾರತದ ಸಂಪತ್ತು ಬರಿದಾಗಿಲ್ಲ. ಸಂಪತ್ತನ್ನು ಇಡಲು ಜಾಗ ಸಾಕಾಗದೆ ಸ್ವಿಸ್ ಬ್ಯಾಂಕ್ ನಲ್ಲಿಯೂ ಇಡಲಾಗುತ್ತಿದೆ ! ಆದರೆ ಭಾರತ ಕೃಷಿ ಪ್ರಧಾನ ದೇಶ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಬಡವರ ದೇಶ  ಎನ್ನುವುದೂ ಕೂಡ ಅಷ್ಟೇ ಸತ್ಯ. ದೇಶದ ಲಕ್ಷಾಧೀಶರು ಕೋಟ್ಯಾಧೀಶರಾಗುತ್ತಿದ್ದಾರೆ, ಬಡವರು ಕಡುಬಡವಾಗುತ್ತಿದ್ದಾರೆ ಎನ್ನುವ ಮಾತನ್ನು ಯಾವುದೇ ಕಾರಣಕ್ಕೂ ತಳ್ಳಿಹಾಕಲಾಗದು. 
           ಸಾವಿರಾರು ವಿದೇಶಿ ಕಂಪೆನಿಗಳು ಭಾರತದತ್ತ ಮುಖಮಾಡಿರುವುದು ಹಾಗೂ ಮಾಡುತ್ತಿರುವುದು ಭಾರತದ ಸಂಪತ್ತಿನ ಆಸೆಯಿಂದ ಹಾಗೂ ಜನರ ಮುಗ್ಧ ಮೂರ್ಖತನವನ್ನು ಬಳಸಿ ಹಣ ಮಾಡುವ ಉದ್ದೇಶದಿಂದ. ಇಂತಹ ವ್ಯಾಪಾರಿಕರಣ ಒಂದೆಡೆಯಾದರೆ, ನಮ್ಮ ದೇಶದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು, ಸಂಪನ್ಮೂಲಗಳ ಕುರಿತು ಅಧ್ಯಯನ ನಡೆಸಲು ಬರುವ ವಿದೇಶಿಯರು ಇನ್ನೊಂದೆಡೆ. ಈ ಎರಡೂ ರೀತಿಯಲ್ಲಿ ಭಾರತದ ಮೇಲೆ ದಾಳಿ ನಡೆಯುತ್ತಿದೆ. ಇದರಿಂದ ಲಾಭವೂ ಇದೆ ಹಾಗೆಯೇ ನಷ್ಟವೂ ಕೂಡ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಗಳು ಬಹುರಾಷ್ಟ್ರೀಯ ಕಂಪೆನಿಗಳ ನೆರಳಿನಲ್ಲಿ ಕಳೆದು ಹೋಗುತ್ತಿವೆ. ಆದರೆ ವಿದೇಶಿ ಪ್ರವಾಸಿಗರಿಂದ ಸರ್ಕಾರ ಬಹಳಷ್ಟು ಹಣವನ್ನು ಸಂಗ್ರಹಿಸುತ್ತಿದೆ ಮಾತ್ರವಲ್ಲ ಜನರೂ ಕೂಡ ಲಾಭ ಪಡೆಯುತ್ತಿದ್ದಾರೆ. ವಿದೇಶಿಗರ ಹಾದಿ ತಪ್ಪಿಸುವ ದಳ್ಳಾಳಿಗಳ ದೊಡ್ಡ ತಂಡವೇ ತಲೆಯೆತ್ತಿದೆ.
         ವಿದೇಶಿ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಕ್ಕೆ ಬರುತ್ತಿದ್ದಂತೆ ' ಖಾಸಗಿ ಗೈಡ್ 'ಗಳು ತಮ್ಮ ಮಾತಿನಲ್ಲೇ ಅವರನ್ನು ಮರಳು ಮಾಡಿ ದೊಡ್ಡ ಮೊತ್ತದ ಹಣ ಪಡೆಯುತ್ತಿದ್ದಾರೆ. ಈ ವಿದೇಶಿಗರು ರಿಕ್ಷಾ ಅಥವಾ ಟ್ಯಾಕ್ಸಿ ಹತ್ತಿದರೆ ಮುಗಿದೇ ಹೋಯಿತು! ಎರಡು ನಿಮಿಷದ ದಾರಿಯನ್ನು ಎರಡು ಗಂಟೆ ಮಾಡಿ ಮಾಮೂಲಿಗಿಂತ ಜಾಸ್ತಿ ಬಾಡಿಗೆ ಪಡೆಯುತ್ತಿದ್ದಾರೆ. ಗೋವಾದಂತಹ ಪ್ರವಾಸಿ ತಾಣಗಳಲ್ಲಿ ಒಂಟಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹಣಕ್ಕಾಗಿ ವಿದೇಶಿಯರ ಕೊಲೆಗಳೂ ನಡೆದಿವೆ. ಭಾರತಕ್ಕೆ ಬಂದ  ಎಷ್ಟೋ ಪ್ರವಾಸಿಗರು ಕಣ್ಮರೆಯಾಗಿದ್ದಾರೆ. ಆದರೆ ಬೆಳಕಿಗೆ ಬಂದ ಪ್ರಕರಣಗಳು ಬೆರಳೆಣಿಕೆಯಷ್ಟು.
         'ಅತಿಥಿ ದೇವೋ ಭವ' ಎನ್ನುವ ನಾವೇಕೆ ಹೀಗೆ ಮಾಡುತ್ತದ್ದೇವೆ? ಭಾರತೀಯ ಸಂವಿಧಾನದಲ್ಲಿ ಇದರ ವಿರುದ್ಧದ ನಿಯಮಗಳಿದ್ದರೂ ಯಾಕೆ ಜಾರಿಯಾಗುತ್ತಿಲ್ಲಾ? ಮಾನುವ ಹಕ್ಕುಗಳ ಆಯೋಗಕ್ಕೆ ಈ ವಿಚಾರಗಳು ತಿಳಿದೇ ಇಲ್ಲವೆ? ಎನ್ನುವ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಇದರ ಕುರಿತು ಬಹಳಷ್ಟು ಹೋರಾಟಗಳು ನಡೆದಿವೆ, ಪೊಲೀಸರು ತನಿಕೆಗಳನ್ನೂ ನಡೆಸಿದ್ದಾರೆ, ಮಾಧ್ಯಮಗಳೂ ಬಹಳಷ್ಟು ವರದಿ ಮಾಡಿವೆ. ಆದರೆ ಹೇಳುವಂತಹ ಬದಲಾವಣೆಗಳೇನು ಆಗಿಲ್ಲ. ಈ ಕಾರಣಗಳಿಂದ ಭಾರತಕ್ಕೆ ಬರುವ ಪ್ರವಾಸಿಗರ, ಸಂಶೋಧಕರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿವೆ. ಭಾರತ ಪ್ರವಾಸಿ ತೆರಿಗೆಯ ಮೇಲೆ ಅವಲಂಬಿತವಾಗಿಲ್ಲದಿದ್ದರೂ ದೇಶದ ಒಟ್ಟು ಆದಾಯದಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ಮೂಲ ಕಾರಣ ಜನರಲ್ಲಿರುವ ಭ್ರಷ್ಟತೆ.  ಹಣಗಳಿಸುವ ಆಸೆ ಜನರನ್ನು ಅಡ್ಡದಾರಿಗೆ ಎಳೆಯುತ್ತದೆ. ಇಂತಹ ಪರಿಸ್ಥಿತಿಗಳು ಬೇರೆದೇಶಗಳಲ್ಲೂ ಇವೆ. ಆದರೆ ಪ್ರಬುದ್ಧ ನಾಗರೀಕರೆಂದು ಹೇಳಿಕೊಳ್ಳುವ ನಾವು ಭಾರತದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುವುದು ವಿಷಾದನೀಯ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಮೌಲ್ಯಾಧಾರಿತ ಉತ್ತಮ ಗುಣಗಳನ್ನು ತನ್ನದಾಗಿಸಿಕೊಂಡು ದೇಶದ, ಸಮಾಜದ ಹಾಗೂ ತನ್ನ ತನಕ್ಕೆ ಕುಂದುಬಾರದಂತೆ ಮಾದರಿಯಾಗಿ ಬದುಕುವುದು ಅತ್ಯಗತ್ಯ. ಪ್ರತಿಯೊಬ್ಬನೊಳಗಿನ ಭ್ರಷ್ಟತೆ ನಾಶವಾಗಿ ತೃಪ್ತಿಯಿಂದ ಕೂಡಿದ, ಮನುಷ್ಯ ಮನುಷ್ಯನ್ನು ಗೌರವಿಸುವ ಹಾಗೂ ಪ್ರೀತಿಸುವ ಸಮಾನತೆಯ ಸಂಸ್ಕೃತಿ ಬೆಳೆದಾಗ ಮಾತ್ರ ಭಾರತ ಜಗತ್ತಿನ ಮಾದರಿ ದೇಶವಾಗಿ ನಿಲ್ಲಲು ಸಾಧ್ಯ.

No comments:

Post a Comment