Jul 2, 2011

‘ ಶಿಕ್ಷಣ ವ್ಯವಸ್ಥೆ ‘ – ನಾನು ಕಂಡಂತೆ…….


ಶಿಕ್ಷಣ ಪ್ರತಿಯೊಬ್ಬನ ಮೂಲಭೂತ ಹಕ್ಕು. ಮಾನವನ ಚಿಂತನೆ, ನಡೆ-ನುಡಿಗಳೆಲ್ಲವೂ ಅವಲಂಬಿತವಾದುದು ಆತನ ಶಿಕ್ಷಣ ಕ್ರಮದ ಮೇಲೆ. ಶಿಕ್ಷಣ ಕೇವಲ ಪುಸ್ತಕದ ಓದು ಬರಹವಲ್ಲ. ನಾವು ಮಾಡುವ ಪ್ರತಿ ಕ್ರಿಯೆಯೂ ಸಮಾಜದಿಂದ ಕಲಿತಿರುವಂತಹದು. ಕಲಿಯುವ ಪ್ರಕ್ರಿಯೆಯೇ ಶಿಕ್ಷಣ. ಪಠ್ಯ ಪುಸ್ತಕದ ಗಂಧ ಗಾಳಿಯೇ ಇಲ್ಲದ ಒಬ್ಬ ರೈತ ಒಳ್ಳೆಯ ಫಲವನ್ನು ಬೆಳೆಯಲು ಸಮರ್ಥನಾಗುವುದು ಆತ ಪೂರ್ವಜರಿಂದ ಕಲಿತ ಶಿಕ್ಷಣದಿಂದ. ಸದೃಢವಾಗಿ ಕಟ್ಟಡಗಳನ್ನು ಕಟ್ಟುವ ಕಾರ್ಮಿಕನೂ ಕೂಡ ಹೆಚ್ಚು ಓದಿ ಬರೆದವನಲ್ಲ. ಆದರೆ ಇಂದಿನ ಸಮಾಜದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ಕಲಿಯುವುದು ಮಾತ್ರ ಶಿಕ್ಷಣ ಎಂಬ ಪರಿಸ್ಥಿತಿ ಬಂದಿರುವುದು ದುರಂತ.
ಶತಮಾನಗಳ ಹಿಂದೆ ನಮ್ಮ ದೇಶದಲ್ಲಿ ಇದ್ದದ್ದು ಗುರುಕುಲ ಶಿಕ್ಷಣ ಪದ್ಧತಿ. ವಿದ್ಯಾರ್ಥಿಗಳು ಕೇವಲ ಪುಸ್ತಕಗಳನ್ನು ಮಾತ್ರ ಓದದೆ ದನ,ಕರುಗಳನ್ನು ಪಾಲಿಸುತಿದ್ದರು, ಕೃಷಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು ಹಾಗೂ ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡುತಿದ್ದರು. ಆದರೆ ಕೇವಲ ಬ್ರಾಹ್ಮಣ, ಕ್ಷತ್ರೀಯರಿಗೆ ಮಾತ್ರ ಗುರುಕುಲಕ್ಕೆ ಸೇರುವ ಅವಕಾಶ ಇತ್ತು, ವರ್ಣ ವ್ಯವಸ್ಥೆಯಡಿಯಲ್ಲಿ ಗುರುಕುಲಗಳು ಉಸಿರಾಡುತಿದ್ದವು ಎನ್ನುವುದೂ ಸತ್ಯ. ಆದರೆ ದೇಶದ ಮೇಲೆ ನಡೆದ ದಾಳಿಗಳಿಂದ ಶಿಕ್ಷಣ ಕ್ರಮ ಬದಲಾಗುತ್ತಾ ಹೊಸ ರೂಪ ಪಡೆದಿದೆ. ಪ್ರಸ್ತುತ ಸಮಾಜದಲ್ಲಿ ಆಧುನಿಕ ಶಿಕ್ಷಣ ನೀಡಲು ಬಹಳಷ್ಟು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಶಿಕ್ಷಣ ಸಂಸ್ಥೆಗಳ ನಡುವೆ ದೊಡ್ಡ ಮಟ್ಟದ ಸ್ಪರ್ಧೆಯೂ ಇದೆ. ಸ್ಪರ್ಧೆ ನಡೆಯುವುದು ಗುಣ ಮಟ್ಟದ ಶಿಕ್ಷಣ ನೀಡುವುದರಲ್ಲಿ ಅಥವಾ ಹಣ ಮಾಡುವುದರಲ್ಲಿ. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಒಂದು ರೀತಿಯ ಹಣ ಮಾಡುವ ವ್ಯವಹಾರವಾಗಿ ಮಾರ್ಪಟ್ಟಿದೆ
ಆದರೆ ಉನ್ನತ ಶಿಕ್ಷಣ ನೀಡುವ ಎಷ್ಟೋ ಸಂಸ್ಥೆಗಳು ಗುಣಮಟ್ಟಕ್ಕೆ ಹೆಸರು ಮಾಡಿ ಬಹಳಷ್ಟು ವಿದ್ಯಾರ್ಥಿಗಳನ್ನು ಸೆಳೆದುಕೊಳ್ಳುತ್ತಿರುವ   ದಿನಗಳಲ್ಲಿ ತನ್ನ ಗುಣಮಟ್ಟವನ್ನು, ವಿದ್ಯಾರ್ಥಿಗಳ ನಂಬಿಕೆಗಳನ್ನು ಕಳೆದುಕೊಳ್ಳುತ್ತಿರುವುದನ್ನು ನೋಡಬಹುದು. ಸಂಸ್ಥೆಗಳಿಗೆ ಹರಿದು ಬರುವ ವಿದ್ಯಾರ್ಥಿ ಸಾಗರಕ್ಕೆ ವ್ಯವಸ್ತಿತವಾದ ತರಗತಿ ಕೋಣೆಗಳನ್ನು ಒದಗಿಸಲು ವಿಫಲವಾಗುತ್ತಿದೆ ಮಾತ್ರವಲ್ಲ  ವಸತಿಯನ್ನು ಒದಗಿಸಲು ಸರಿಯಾದ ತಯಾರಿ ನಡೆಸುತ್ತಿಲ್ಲ. ತನ್ನ ಪರಿಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು  ಸೇರಿಸಿಕೊಂಡು ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಲು ಪರದಾಡುತ್ತಿದೆ
ಇದಕ್ಕಿಂತ ಗಂಭೀರವಾದ ಸಮಸ್ಯೆ ಇನ್ನೊಂದಿದೆ. ಅದೇನೆಂದರೆ ಉಪನ್ಯಾಸಕರ ಕೊರತೆ. ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಪನ್ಯಾಸಕ ವೃತ್ತಿಗೆ ಬರುವ ಯುವಜನರು ತೀರಾ ವಿರಳ. ಹಳಬರು ನಿವೃತ್ತಿ ಹೊಂದುತ್ತಿದ್ದಾರೆ ಆದರೆ ಹೊಸಬರು ಉಪನ್ಯಾಸಕರಾಗಿ ಬರುತ್ತಿದ್ದಾರೆ. ಇದೇ ಕಾರಣಕ್ಕಾಗಿ ಇತ್ತೀಚಿಗೆ ಕರ್ನಾಟಕ ಹೈ-ಕೋರ್ಟ್ ಯು.ಜಿ.ಸಿ. ಉಪನ್ಯಾಸಕರ ನಿವೃತ್ತಿ ವಯೋಮಾನವನ್ನು 60 ರಿಂದ 65 ಕ್ಕೆ ವಿಸ್ತರಿಸುವಂತೆ ಆದೇಶ ಹೊರಡಿಸಿದೆ. ಶಿಕ್ಷಣ ಸಂಸ್ಥೆಗಳಿಗೆ ನುರಿತ ಉಪನ್ಯಾಸಕರನ್ನು ಒದಗಿಸಲಾಗುತ್ತಿಲ್ಲ.  ಒಳ್ಳೆಯ ಅಂಕ ಪಡೆದ ಅಥವಾ ವಿಷಯದ ಜ್ನಾನ ವಿರುವವರು ಯಾವುದೋ ಕಂಪೆನಿಗಳಲ್ಲಿ ಸ್ತಾನ ಪಡೆದಿರುತ್ತಾರೆ. ಆದರೆ ಅಲ್ಪ ಸ್ವಲ್ಪ ಜ್ಞಾನವಿರುವ ಎಲ್ಲೂ ಸಲ್ಲದವರು ಉಪನ್ಯಾಸಕರಾಗಿ ಬರುತ್ತಾರೆ. ಉಪನ್ಯಾಕರ ಕೊರತೆಯಿರುವ ಶಿಕ್ಷಣಸಂಸ್ತೆಗಳು ಇಂತಹವರನ್ನು ಯಾವುದೇ ಮಾನದಂಡವಿಲ್ಲದೇ ಸಿಕ್ಕಿದ್ದೇ ಪುಣ್ಯವೆಂಬಂತೆ ತೆಗೆದುಕೊಳ್ಳುತ್ತಾರೆ. ಎಷ್ಟೋಕಡೆ ತಮ್ಮ ಉನ್ನತ ಶಿಕ್ಷಣವನ್ನು ಪೂರ್ತಿಗೊಳಿಸುವ ಮೊದಲೇ ಉಪನ್ಯಾಸಕರಾಗಿ ನಿಯುಕ್ತಿ ಹೊಂದುತ್ತಿದ್ದಾರೆ. ತರಗತಿಗಳಲ್ಲಿ ಬಾಯಿಪಾಠ ಒಪ್ಪಿಸುವುದೋ ಅಥವಾ ಪುಸ್ತಕವನ್ನು ಓದಿಹೇಳುವುದನ್ನು ಮಾಡುತ್ತಾರೆ. ಕಾರಣದಿಂದ ವಿದ್ಯಾರ್ಥಿಗಳ ನಗೆ ಪಾಟಲಿಗೆ ಗುರಿಯಾಗುತಿದ್ದಾರೆ ಇಂತಹ ಉಪನ್ಯಾಸಕರು. ವಿದ್ಯಾರ್ಥಿಗಳು ಬಹಳಷ್ಟು ಹಣವನ್ನು ವ್ಯಯಿಸಿಯೂ ಕೂಡ ಗುಣಮಟ್ಟದ, ಉತ್ತಮ ಶಿಕ್ಷಣದಿಂದ  ವಂಚಿತರಾಗಿದ್ದಾರೆ.
ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಲವು ಶಿಕ್ಷಣ ಸಂಸ್ಥೆಗಳು ಅತೀ ಕಡಿಮೆ ಹಣವನ್ನು ಪಡೆದು ಉತ್ತಮ ಗುಣಮಟ್ಟದ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಶಿಕ್ಷಣ ಒದಗಿಸುತ್ತಿದೆ. ಆದರೆ ಸಮಾಜದಲ್ಲಿ ಲಾಭಕೋರ ಸಂಸ್ಥೆಗಳೇ ರಾರಾಜಿಸುತ್ತಿವೆ. ವಿದ್ಯಾರ್ಥಿಗಳ ಕಣ್ಣಿಗೆ ಮಣ್ಣೆರಚುವ ತಂತ್ರಗಳಲ್ಲೇ ಮಗ್ನವಾಗಿವೆ ಸಂಸ್ಥೆಗಳು. ಕೊನೆಗೆ ಬಲಿಪಶು ಆಗುತ್ತಿರುವವರು ವ್ಯಾವಹಾರಿಕ ಶಿಕ್ಷಣ ಸಂಸ್ಥೆಗಳ ಬಣ್ಣಗಾರಿಕೆಗೆ. ವಿದ್ಯಾರ್ಥಿ ಜೀವನದಿಂದ ಹೊರಬಂದಾಗ ಇಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಸೋಲುತಿದ್ದಾರೆ
ಇದನ್ನು ಗಮನಿಸಬೇಕಾದವರು ಯುವ ಜನತೆ ಹಾಗೂ ಲಕ್ಷಾಂತರ ಹಣವನ್ನು ಸುಲಿಗೆ ಮಾಡುತ್ತಿರುವ ಶಿಕ್ಷಣ ಸಂಸ್ತೆಗಳು. ಯುವಜನತೆ ಕೇವಲ ಹಣ ಮಾಡುವ ಕೆಲಸದ ಹಿಂದೆ ಓಡದೆ ಉಪನ್ಯಾಸಕರ ವೃತ್ತಿಗಳತ್ತ ಮುಖ ಮಾಡಬೇಕು. ಶಿಕ್ಷಣ ಸಂಸ್ಥೆಗಳೂ ಸಹ ಉತ್ತಮ ಉಪನ್ಯಾಸಕರನ್ನು ನಿಯುಕ್ತಿಗೊಳಿಸಬೇಕು ಹಾಗೂ ಉಪನ್ಯಾಸಕರಿಗೆ ಉತ್ತಮ ವೇತನವನ್ನೂ ನೀಡಬೇಕು. ವಿದ್ಯಾರ್ಥಿಗಳಿಗೆ ಬೇಕಾದ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಪೂರಕ ವಾತವರಣವನ್ನು ಒದಗಿಸಿದಾಗ ಮಾತ್ರ ಉತ್ತಮ ನಾಗರೀಕ ಸಮಾಜದ ನಿರ್ಮಾಣ ಸಾಧ್ಯ..   

No comments:

Post a Comment