Jun 15, 2011

ಬಿಸಿಲು ಮಳೆ.. ಬಿಸಿ-ಮಳೆ?


ಓ ಹೋಯ್.. ನರಿಯಣ್ಣನ ಮದುವೆಯಂತೆ! ಬಿಸಿಲು ಮಳೆ ಬರ್ತಾ ಇದೆ. ಆದ್ರೆ ಬಿಸಿಲು ಮಳೆ ಬಿಸಿಯಾಕಿಲ್ಲ?
         
ಬಿಸಿಲು ಮಳೆ ಪ್ರಕೃತಿಯ ಒಂದು ವಿಸಿಷ್ಟ ವಿಚಿತ್ರ. ಮಳೆಗಾಲ ಪ್ರಾರಂಭವಾದಂತೆ ದಟ್ಟ ಮೋಡ ಕವಿದು, ಕತ್ತಲಾವರಿಸಿ, ಸೂರ್ಯ ಆಗೊಮ್ಮೆ ಈಗೊಮ್ಮೆ ಮೇಘಗಳ ಮರೆಯಲ್ಲಿ ಇಣುಕುವ ಸನ್ನಿವೇಶ. ಇದರ ನಡುನಡುವೆ ಅಪರೂಪಕ್ಕೊಮ್ಮೆ ಬಿಸಿಲುಮಳೆ ಕಾಣಸಿಗುತ್ತದೆ. ಸೂರ್ಯನ ಪ್ರಭೆ ಇರುವಾಗಲೇ ವರ್ಷಧಾರೆ! ಜನಪದೀಯರ ಪ್ರಕಾರ ನರಿಯಣ್ಣನ ಮದುವೆಯ ದಿನ ಬಿಸಿಲು ಮಳೆ. ಮಳೆಹನಿ ಬೀಳುವುದು ಆಗಸದಿಂದ. ನಮ್ಮಿಂದ ಲಕ್ಷಾಂತರ ಕಿಲೋಮೀಟರ್  ದೂರವಿರುವ ಸೂರ್ಯನ ಶಾಖ ನಮಗೆ ತಟ್ಟುತ್ತದಂತೆ; ಆದರೆ ಮೇಲಿಂದ ಬೀಳುವ ಮಳೆಹನಿಗೆ ಸೂರ್ಯನ ಬಿಸಿ ತಾಗೋದೆ ಇಲ್ವೆ? ಮಳೆಹನಿಗಳು ಯಾಕೆ ಬಿಸಿಯಾಗಿಲ್ಲ? ಯಾಕೆ ಬಿಸಿನೀರಿನ ಮಳೆಯಾಗೊಲ್ಲ?
          ಪ್ರಕೃತಿಯ ಎಷ್ಟೋ ವೈಪರಿತ್ಯಗಳಲ್ಲಿ ಇದೂ ಒಂದಾದರೆ? ಬಿಸಿನೀರಿನ ಮಳೆ ಬರುತ್ತಿದ್ದರೆ? ಊಹಿಸಲು ಅಸಾಧ್ಯವೇನಲ್ಲ. ಆದರೂ ಯೋಚಿಸ ಹೊರಟಾಗ ನಮ್ಮಲ್ಲಿ ಅನೇಕ ಸಂಗತಿಗಳು ಉದ್ಭವಿಸುತ್ತವೆ. ಮನೆಯಲ್ಲಿ ಸ್ನಾನಕ್ಕೆ ನೀರು ಬಿಸಿ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. ಮಳೆನೀರನ್ನು ಸಂಗ್ರಹ ಮಾಡಿದರಾಯ್ತು! ಕುಡಿಯುವ ನೀರನ್ನು ಕುದಿಸುವ ಅಗತ್ಯವೇ ಇಲ್ಲ. ನೀರು ಬಿಸಿಯಾಗಿಯೇ ಇರುತ್ತದೆ. ಬಾವಿ, ಕೆರೆ, ಹೊಳೆ ಎಲ್ಲಾ ನೀರೂ ಬಿಸಿ ಬಿಸಿ!
          ವೈಜ್ಞಾನಿಕವಾಗಿ ಇದು ಸಾಧ್ಯವೆ? ಹೀಗೂ ಆಗಬಹುದೊ?ಸೂರ್ಯನ ಶಾಖಕ್ಕೆ ಮೇಲಿರುವ ನೀರು ಬಿಸಿಯಾದರೂ ಅದು ಧರೆಗಿಳಿಯುವುದು ತಂಪಾದ ಗಾಳಿ ಸೋಕಿದಾಗ. ತಂಪುಗಾಳಿಯಿಂದ ನೀರಾವಿ ನೀರಾಗಿ ಸುರಿಯುತ್ತದೆ. ವಾತಾವರಣದ ಗಾಳಿ, ನೀರ ಬಿಸಿಯಾಗಿದ್ದರೂ ಅದನ್ನು ತಂಪಾಗಿಸುತ್ತದೆ. ಆ ಮಳೆಯ ಹನಿಗಳು ಭೂಸ್ಪರ್ಶ ಮಾಡುವುದು ತಣ್ಣಗಾಗಿಯೇ ಹೊರತು ಬಿಸಿಯಾಗಿ ಅಲ್ಲ.
          ಜಾನಪದದ ಅಜ್ಜಿಕತೆಯಲ್ಲಿ ಕೆಂಡದಮಳೆ ಸೃಷ್ಟಿಯಾದಂತೆ ಬಿಸಿನೀರಿನ ಮಳೆ ಸೃಷ್ಟಿಯಾಗಬೇಕಷ್ಟೆ.  ಆದರೂ ಬಿಸಿಲುಮಳೆ ಬಂದಾಗ ಇಂತಹ ಪ್ರಶ್ನೆಗಳು ಒಂದು ಕ್ಷಣದ ಯೋಚನೆಗೆ ಎಡೆಮಾಡುತ್ತದೆ. ಕೆಲವೊಮ್ಮೆ ಬಾಲಿಶವೆನಿಸಿದರೂ ಮಗದೊಮ್ಮೆ ಮಂದಹಾಸ ಮೂಡಿಸುವ ಇಂತಹ ಪ್ರಶ್ನೆಗಳು ವೈಜ್ಞಾನಿಕವಾಗಿ ಚರ್ಚೆಯಾದಾಗ ಹೊಸ ವಿಚಾರಗಳು ಹೊರಹೊಮ್ಮಬಹುದು.

No comments:

Post a Comment