Jun 30, 2011

ಜೀವನದೊಳಗಿನ ನಾಟಕ

         ರಂಗಭೂಮಿ ಮನೋರಂಜನೆಗಾಗಿ ಹುಟ್ಟಿಕೊಂಡರೂ, ಬೆಳೆಯುತ್ತಾ ಅದರ ದಿಕ್ಕು ಹಾಗೂ ಉದ್ದೇಶಗಳನ್ನು ಬದಲಾಗುತ್ತಾ ಬಂದಿದೆ ಮತ್ತು ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳೂ ನಡೆಯುತ್ತಿದೆ.ರಂಗಭೂಮಿ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ ಜನಸಾಮಾನ್ಯರ ಮತ್ತು ಸಮಾಜದ ಆಶೋತ್ತರಗಳಿಗೆ ಸ್ಪಂದಿಸುತ್ತಾ " ಬದುಕಿಗಾಗಿ ರಂಗಭೂಮಿ " ಎನ್ನುವ ಪರಿಕಲ್ಪನೆಯನ್ನು ಅಳವಡಿಸಿಕೊಂಡಿದೆ.
ಈ ದೆಸೆಯಲ್ಲಿ ಕರ್ನಾಟಕದಲ್ಲಿ 70ರ ದಶಕದ ಸಾಂಸ್ಕೃತಿಕ ಹೊಸ ಅಲೆಯ ಮೂಲಕ ಪ್ರಚಲಿತವಾದದ್ದು 'ಆಪ್ತ ರಂಗಭೂಮಿ'. ಆಪ್ತ ರಂಗಭೂಮಿ ಅಂದರೆ ರಂಗಮಂಚವನ್ನು ಬಿಟ್ಟು ಪ್ರೇಕ್ಷಕರಿಗೆ ಬಹಳ ಹತ್ತಿರವಾಗಿ ಹಾಗೂ ಸರಳವಾಗಿ ನಾಟಕವನ್ನು ಪ್ರದರ್ಶಿಸುವುದು. ಇದೇ ರೀತಿಯಲ್ಲಿ ಸಿದ್ಧಗೊಂಡ ನಾಟಕ ಪ್ರಸನ್ನರ 'ಹದ್ದು ಮೀರಿದ ಹಾದಿ'.
         ಹದ್ದು ಮೀರಿದ ಹಾದಿ ನಾಟಕದ ಕಥೆ ಹತ್ತೊಂಬತ್ತನೆ ಶತಮಾನದ ಖ್ಯಾತ ಹಿಂದಿ ನಾಟಕಕಾರರಾದ ಭಾರತೇಂದು ಹರಿಶ್ಚಂದ್ರ ಅವರ ಬದುಕಿನ ಕುರಿತಾದುದು. ನಾಟಕದ ಪಾತ್ರವಾಗಿ ತನ್ನ ಆಪ್ತರಿಂದ ಬಾಬೂಜಿ ಎಂದು ಕರೆಯಿಸಿಕೊಳ್ಲುವ ಭಾರತೇಂದು, ತನ್ನನ್ನು ಕರೆದೊಯ್ಯಲು ಬಂದ ಮೃತ್ಯುವಿನೊಂದಿಗೆ ಸೆಣೆಸಾಡುವುದು ನಾಟಕದ ಮುಖ್ಯವಸ್ತು. ಭಾರತೇಂದು ಸಾವಿನ ಜೊತೆ ಪಗಡೆಯಾಡುತ್ತಿದ್ದರೆ, ಅತ್ತ ಆತನ ಸಂಗಾತಿ ಮಲ್ಲಿಕಾ ಬಾಬುವನ್ನು ಮತ್ತೆ ಬದುಕಿನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಕಾಶಿಯಲ್ಲಿ ಭಾರತೇಂದು ರವರ ನಾಟಕಗಳ ಉತ್ಸವದ ತಯಾರಿ ನಡೆಯುತ್ತಿರುತ್ತದೆ. ನಾಟಕ ತಾಲೀಮು ನಡೆಯುವ ಸ್ಥಳಕ್ಕೆ ಮರಗಸ-ಗರಗಸರೆನ್ನುವವರು ಬಂದು, ವೀದೇಶಿಯೊಬ್ಬ ಭಾರತೇಂದುರವರನ್ನು ಹುಡುಕುತ್ತಿರುವುದಾಗಿ ಹೇಳುತಿದ್ದಂತೆ ವಿದೇಶಿಯ ವೇಷದಲ್ಲಿರುವ ಮೃತ್ಯು ಅಲ್ಲಿಗೆ ಆಗಮಿಸಿ ಭಾರತೇಂದುರವರ ಮನೆಯ ದಾರಿ ತೋರುವಂತೆ ಕೇಳಿಕೊಳ್ಳುತ್ತಾನೆ. ತದ ನಂತರ ಭಾರತೇಂದುವನ್ನು ಭೇಟಿಮಾಡಿ ತನ್ನೊಂದಿಗೆ ಬರಲು ಹೇಳುತ್ತಾನೆ. ಆಗ ಬಾಬೂಜಿ, ನೀನು ಪಗಡೆಯಲ್ಲಿ ಗೆದ್ದಾಗ ನಿನ್ನೊಂದಿಗೆ ಬರುವೆ ಎಂದು ಪಣಕಟ್ಟಿ ಕೊನೆಗೆ ಮೃತ್ಯುವಿನ ಜೊತೆಗೆ ಗಂಗಾ ನದಿ ದಾಟುತ್ತಾನೆ.ಕೊನೆಗೆ ಆತನ ಹೆಸರಿನಲ್ಲಿ ನಾಟಕೋತ್ಸವ ನಡೆಸಲು ನಿರ್ಧರಿಸುತ್ತಾರೆ. ಈ ನಾಟಕದ ಮತ್ತೊಂದು ಮುಖ್ಯವಸ್ತು ಬ್ರಿಟಿಷ ಆಕ್ರಮಣದ ಪ್ರಭಾವಕ್ಕೆ ಒಳಗಾಗುತ್ತಾ ತನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಟ್ಟುಪಾಡುಗಳೊಂದಿಗೆ ಹೊಸ ಸಾಮಾಜಿಕ ರೂಪ ಪಡೆಯುತ್ತಿದ್ದ ಕಾಶಿ ಮತ್ತು ಅಲ್ಲಿಯೇ ನೆಲೆನಿಂತ ಮೃತ್ಯು. ಹೀಗೆ ಭಾರತೇಂದು, ಮೃತ್ಯು ಮತ್ತು ಕಾಶಿ ಇವುಗಳ ನಡುವಿನ ಸಂಕೀರ್ಣತೆ ಹಾಗೂ ವೈರುಧ್ಯಗಳನ್ನು ದಾಖಲಿಸುವ ಪ್ರಯತ್ನ ಮಾಡುತ್ತದೆ ಈ ನಾಟಕ. 
        ತನ್ನ ಸರಳತೆ ಹಾಗೂ ಸಹಜತೆಯಿಂದ ನಾಟಕ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ. ಅತ್ಯಲ್ಪ ರಂಗ ಸಜ್ಜಿಕೆ, ಪರಿಕರ, ಬೆಳಕಿನ ಬಳಕೆ ಮತ್ತು ಯಾವುದೇ ಧ್ವನಿವರ್ಧಕಗಳನ್ನು ಬಳಸದೆ ಅತ್ಯಂತ ಪ್ರಭಾವಶಾಲಿಯಾಗಿ ಪ್ರಸ್ತುತಪಡಿಸಿದ ನಾಟಕ, ನಿರ್ದೇಶಕರಾದ ವೆಂಕಟರಮಣ ಐತಾಳರ ಪ್ರತಿಭೆ, ಜಾಣ್ಮೆಯನ್ನು ತೋರಿಸುತ್ತದೆ. ಕಲಾವಿದರ ಸಹಜ ಅಭಿನಯ, ವಸ್ತುವಿನ ಪ್ರಸ್ತುತತೆ ಹಾಗೂ ಅಲ್ಲಲ್ಲಿ ಬಳಸಿದ ಸಂಗೀತ ನಾಟಕದ ಗುಣಾತ್ಮಕ ಅಂಶಗಳು. ಭಾರತೇಂದುವಿನ  ಬಗ್ಗೆ ಅಸೂಯೆ ಪಡುವ ಆತನ ಗುರು ರಾಜಾ ಶಿವಪ್ರಸಾದನ ಪಾತ್ರ ವಹಿಸಿದ ಸಿದ್ಧಾರ್ಥ ಬೆಂಗಳೂರು ತನ್ನ ಅಭಿನಯ ಮತ್ತು ಸ್ವರದ ಏರಿಳಿತಗಳಿಂದ, ಮೃತ್ಯುವಾಗಿ ಕಾಣಿಸಿಕೊಂಡ ಉಮೇಶ್ ಎನ್. ಸಾಲಿಯಾನ್ ತನ್ನ ಎಂದಿನ ಸ್ಫಷ್ಟ ಮತ್ತು ಸ್ಪುಟವಾದ ಮಾತುಗಾರಿಕೆಯಿಂದ, ಭಾರತೇಂದುವಾಗಿ ಕಾಣಿಸಿಕೊಂಡ ಯಶವಂತ್ ಕುಚಬಾಳ ಮತ್ತು ನವೀನ್ ಕುಮಾರ ಎಸ್.ಪಿ., ಭಾರತೇಂದುವಿನ ಸಂಗಾತಿ ಮಲ್ಲಿಕಾಳ ಪಾತ್ರ ನಿರ್ವಹಿಸಿದ ವಿದ್ಯಾ ಶಿವಮೊಗ್ಗ, ಬೇರೆ ಬೇರೆ ಪಾತ್ರಗಳನ್ನು ಅಭಿನಯಿಸಿದ ಯೋಗೇಶ್ ಬಿ.ಎಮ್., ದುರ್ಗ ಎಮ್., ರಾಘವೇಂದ್ರ ಪಿ. ಎಸ್. ಎಲ್ಲರೂ ಪಾತ್ರಗಳಿಗೆ ಜೀವ ತುಂಬುವುದರೊಂದಿಗೆ ಪ್ರೇಕ್ಷಕರನ್ನು ನಾಟಕದುದ್ದದಕ್ಕು ಹಿಡಿದಿಡುತ್ತಾರೆ. ಹೆಗ್ಗೋಡಿನ ಥಿಯೇಟರ್ ಸಮುರಾಯ್'ಸ್ ತಂಡ ಎರಡನೇ ವರ್ಷದ ತಿರುಗಾಟದಲ್ಲಿ ಪ್ರಸ್ತುತ ಪಡಿಸಿದ ಹದ್ದು ಮೀರಿದ ಹಾದಿ, ಸುಲಭವಾಗಿ ಅರ್ಥೈಸಲಾಗದ ಆದರೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಸುಂದರ ನಾಟಕ. ಇಂತಹ ನಾಟಕಗಳು, ತಂಡಗಳು ಹಾಗೂ ಕಲಾವಿದರು, ಸಹೃದಯ ಪ್ರೇಕ್ಷಕರನ್ನು ಸೃಷ್ಠಿಸಲಿ ಮತ್ತು ರಂಗಭೂಮಿಯ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಲಿ ಎಂದು ಹಾರೈಸೋಣ... 
       

No comments:

Post a Comment