Jun 15, 2011

ಮಳೆ ಬರುವ ಹಾಗಿದೆ!!… ಮಳೆ ನಿಂತು ಹೋದ ಮೇಲೆ??


ಅದು ಜೂನ್ ತಿಂಗಳ ಮೊದಲವಾರ. ವರುಣನು ಇಳೆ ತಣಿಸಲು ಅಣಿಯಾಗುತ್ತಿದ್ದ.
ಅದೇ ಸಮಯದಲ್ಲಿ ನಾನು ಸ್ಕೌಟ್ ರಾಷ್ರಪತಿ ಪುರಸ್ಕಾರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಆ ದಿನ ಬಂದೇ ಬಿಟ್ಟಿತು. ಪರೀಕ್ಷೆಗೆ ನಾನು ಬೆಂಗಳೂರಿಗೆ ಹತ್ತಿರವಿರುವ ದೊಡ್ಡಬಳ್ಳಾಪುರ ಎಂಬ ಊರಿಗೆ ಹೋಗಬೇಕಿತ್ತು. ಎರಡು ದಿನ ಮುಂಚಿತವಾಗಿಯೆ ಬೆಂಗಳೂರಿಗೆ ಹೊರಟೆ. ನನ್ನೊಂದಿಗೆ ಯಾರೂ ಇರಲಿಲ್ಲ. ನಾನೊಬ್ಬನೆ ಬೆಂಗಳೂರಿಗೆ ರಾತ್ರಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆ. ಅಲ್ಲಿ ತಲುಪುವಾಗ ಹಗಲಾಗಿತ್ತು. ನಂತರ ಮೆಜೆಸ್ಟಿಕ್ ನಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ಬಸ್ ಹಿಡಿದು ಹೊರಟೆ.
          ದೊಡ್ಡಬಳ್ಳಾಪುರ ಒಂದು ಹಳ್ಳಿ. ನಮ್ಮ ಪರೀಕ್ಷೆಯ ಸ್ಥಳ ಪೇಟೆಯಿಂದ ನಾಲ್ಕು ಕಿ.ಮೀ. ಒಳಗೆ. ನಾನು ನನ್ನ ಪರಿಕರಗಳನ್ನು ಹೊತ್ತುಕೊಂಡು ನಡೆಯುತ್ತಾ ಸಾಗಿದೆ. ಅದು ಒಂದು ಪುಟ್ಟ ಕಾಡು, ಕಾಡಿನ ನಡುವೆ ದೊಡ್ಡ ಮೈದಾನ, ಸ್ಕೌಟ್ ಭವನ. ನೊಂದಣಿ ಮುಗಿಸಿ ನಿತ್ಯಕರ್ಮಗಳನ್ನು ಪೂರೈಸಿದೆ. ಹನ್ನೆರಡು ಹುಡುಗರ ಗುಂಪುಮಾಡಿ ಡೇರೆ ಹಾಕಲು ಎಲ್ಲಾ ಸಲಕರಣೆಗಳನ್ನು ಒದಗಿಸಿದರು. ನಾವು ನಮಗೆ ನಿಗದಿ ಪಡಿಸಿದ ಜಾಗದಲ್ಲಿ ಡೇರೆ ಸಿದ್ಧಪಡಿಸಿದೆವು. ನಾವು ಅದರಲ್ಲೇ ಉಳಿಯಬೇಕಿತ್ತು. ಆ ದಿನ ಯಾವುದೇ ಪರೀಕ್ಷೆ ಇಲ್ಲದ ಕಾರಣ ನಾವು ವಿಶ್ರಾಂತಿ ಪಡೆಯುತ್ತಿದ್ದೆವು. ಅಂದು ಸಂಜೆಯ ವರೆಗೆ ಮಳೆಯ ಯಾವುದೇ ಲಕ್ಷಣ ಇರಲಿಲ್ಲ. ಆದರೆ ರಾತ್ರಿ ಇದ್ದಕ್ಕಿದ್ದಂತೆ ವರುಣದೇವ ಎಚ್ಚೆತ್ತ!
          ಅಂದು ರಾತ್ರಿ ಧಾರಾಕಾರ ಮಳೆಸುರಿಯತೊಡಗಿತು. ವರುಣನೊಂದಿಗೆ ಮರುತನೂ ಜೋರಾಗಿ ಅಬ್ಬರಿಸಿದ. ಮಳೆಯ ತೀವೃತೆ ಕಡಿಮೆಯಾಗುವ ಯಾವ ಲಕ್ಷಣವೂ ಕಾಣಲಿಲ್ಲ. ಗಾಳಿಯ ರಭಸಕ್ಕೆ ಮರಗಳು ಮುರಿದು ಬಿದ್ದವು. ವಿದ್ಯುತ್ ಕಂಬಗಳು ಧರೆಗುರುಳಿದವು. ಎಲ್ಲೆಲ್ಲೂ ಕತ್ತಲು ಕವಿದಿತ್ತು. ಒಂದೇ ಒಂದು ಮಿಣುಕು ಹುಳು ಕೂಡ ಬೆಳಕು ಚೆಲ್ಲುವ ಉತ್ಸಾಹದಲ್ಲಿರಲಿಲ್ಲ. ಎಲ್ಲೊ ನಾಯಿ ಬೊಗಳುವ ಸದ್ದು, ಮತ್ತೆಲ್ಲೊ ಗೂಬೆಯ ಭಯಾನಕ ಧ್ವನಿ. ಕೀಟಗಳ ಕಿರಿಚಾಟ ಎಲ್ಲವೂ ಸರಿಯಾಗಿ ಗೋಚರಿಸುತ್ತಿತ್ತು. ಗಾಳಿಯ ಅಬ್ಬರ ತೀವೃವಾಗುತ್ತಿದ್ದಂತೆ ನಮ್ಮ ಡೇರೆ ನೆಲಕಿತ್ತು ಬಹುದೂರ ಪಯಣಿಸಿತ್ತು. ಎಲ್ಲರ ವಸ್ತುಗಳು ನೀರಿನಲ್ಲಿ ತೇಲುತ್ತಿದ್ದವು. ಇದ್ದ ಸುಮಾರು ಐವತ್ತು ಮಂದಿಯೂ ನೀರಲ್ಲಿ ಸಂಪೂರ್ಣ ಒದ್ದೆಯಾಗಿದ್ದರು. ಎಲ್ಲರೂ ಒಂದು ಸೂರಿಗಾಗಿ ಹೊರಾಡುತ್ತಿದ್ದರು. ಎಲ್ಲೆಲ್ಲೊ ಹೋಗಿದ್ದ ಟೆಂಟ್ ಗಳನ್ನು ತಂದು ಪುನಃ ಸ್ಥಾಪಿಸುವ ವಿಫಲ ಪ್ರಯತ್ನವನ್ನೂ ನೆಡೆಸುತ್ತಿದ್ದರು. ಅವರಲ್ಲಿ ನಾನೂ ಹೊರತಲ್ಲ. ಸ್ವಲ್ಪ ಸಮಯದ ನಂತರ ವರುಣ ನಮ್ಮ ಮೇಲೆ ಕೃಪೆ ತೋರಿದ. ಗಾಳಿಯ ವೇಗ ಕಡಿಮೆಯಾಯಿತು. ಡೇರೆಗಳು ಮರು ನಿರ್ಮಾಣದ ಹಂತದಲ್ಲಿದ್ದವು. ಕೆಲವರು ತಮ್ಮ ತಮ್ಮ ವಸ್ತುಗಳನ್ನು ಹುಡುಕುತ್ತಿದ್ದರು. ಅಷ್ಟರಲ್ಲಿ ಮೂಡಣದಲ್ಲಿ ರವಿಯು ಇಳೆಯಲ್ಲಿ ಏನಾಗಿರಬಹುದು ಎಂಬ ಕುತೂಹಲದಿಂದ ಇಣುಕುತ್ತಾ ಭೂಮಿಯ ಮೇಲೆ ತನ್ನ ಪ್ರಭಾವ ಬೀರಲು ಅಂಬೆಗಾಲಿಡುತ್ತಿದ್ದ.

No comments:

Post a Comment