May 27, 2011

ಚಿತ್ರ-ಕಲಾವಿದ


ಒಂದು ಚಿತ್ರ ಸಾವಿರ ಮಾತುಗಳಿಗೆ ಸಮ.  ಚಿತ್ರಕಲೆ ಒಂದು ಅಭಿವ್ಯಕ್ತಿ ಮಾಧ್ಯಮ. ಚಿತ್ರಕಾರ ತನ್ನ ಕಲ್ಪನೆಗೆ, ರೇಖೆ ಹಾಗೂ ಬಣ್ಣಗಳ ಮೂಲಕ ಆಕಾರ ಕೊಡುತ್ತಾನೆ.
ಚಿತ್ರಗಳು ಕಲಾವಿದನ ಮನಸ್ಸಿಗೆ ಹಿಡಿದ ಕೈಗನ್ನಡಿ. ಮಾತಿನ ಮೂಲಕ ಹೇಳಲಾರದ ವಿಷಯಗಳನ್ನೂ ಕೂಡ ಕಲಾವಿದ ತನ್ನ ಈ ಮಾಧ್ಯಮದ ಮುಖಾಂತರ ಹೇಳಬಹುದು. ಇದು ಕಲೆಯ ಹೆಚ್ಚುಗಾರಿಕೆ. ಚಿತ್ರದಲ್ಲಿರುವ ಬಣ್ಣಗಳು ಕಲಾವಿದನ ಭಾವನೆಗಳನ್ನು ಪ್ರತಿನಿಧಿಸುತ್ತದೆ. ವರ್ಣರಂಜಿತ ಕಲಾಕೃತಿ ನೋಡುಗನನ್ನು ಹೊಸ ಯೋಚನೆಯ ಕಡೆಗೆ ಸೆಳೆಯುತ್ತದೆ.
ಚಿತ್ರಕಲೆ ಒಬ್ಬವ್ಯಕ್ತಿ ತನ್ನ ಸ್ವಸಾಮರ್ಥ್ಯದಿಂದ ಮಾಡಬಹುದಾದ ಕಲೆ. ಅದೇ ನಾಟಕದಂತಹ ಪ್ರದರ್ಶನ ಕಲೆಗಳಲ್ಲಿ, ಒಬ್ಬ ವ್ಯಕ್ತಿ ಅನ್ನುವುದಕ್ಕಿಂತ ಒಂದು ಪಾತ್ರಕ್ಕೆ ಹೆಚ್ಚಿನ ಮಹತ್ವ. ಇಂತಹ ಪ್ರದರ್ಶನ ಕಲೆಗಳು ಸಂಘಟನಾ ಕಾರ್ಯದಿಂದ ಮಾಡಬೇಕಾದದ್ದು. ಸಾಮಾನ್ಯವಾಗಿ ತಂಡ ಸಿದ್ಧವಿದ್ದಾಗ ಮಾತ್ರ ನಾಟಕವನ್ನು ಮಾಡಲು ಸಾಧ್ಯ. ಆದರೆ ಚಿತ್ರಕಲೆಯಲ್ಲಿ ಈ ಸಮಸ್ಯೆ ಇಲ್ಲ. ಒಂದು ಚಿತ್ರ ಒಬ್ಬ ಕಲಾವಿದನ ಪ್ರತಿಭಾ ಪ್ರದರ್ಶನ. ಆದ್ದರಿಂದ ತಂಡದ ಕಲ್ಪನೆಯೇ ಚಿತ್ರಕಲೆಗೆ ಒಂದು ಹೊಸ ವಿಷಯ.
ಬಣ್ಣಗಳ ಚಿತ್ತಾರದ ಮೂಲಕ, ಕಲಾವಿದ ತನ್ನ ಅನಿಸಿಕೆಗಳನ್ನು ನೋಡುಗನಿಗೆ ಸರಿಯಾಗಿ ತಲುಪಿಸಲು ಸಾಧ್ಯವಾದಗ ಮಾತ್ರ ಆ ಚಿತ್ರ ಗೆಲ್ಲುತ್ತದೆ. ಕಲಾವಿದ ತನ್ನ ಕುಂಚಕ್ಕೆ ಕೆಲಸ ಕೊಡುವ ಮುಂಚೆ ತನ್ನದೆ ಆದ ಪೂರ್ವ ತಯಾರಿಯಲ್ಲಿ ಮಗ್ನನಾಗುತ್ತಾನೆ. ಮೊದಲಿಗೆ ಆತನ ಮನಃಪಟಲದಲ್ಲಿ ಚಿತ್ರ ರೂಪು ಪಡೆಯುತ್ತದೆ. ನಂತರ ಅದರ ಪ್ರತಿಬಿಂಬ ಕಾಗದದ ಮೇಲೆ ಮೂಡುತ್ತದೆ. ರೇಖೆಗಳನ್ನು ಗೀಚಿ, ನಂತರ ಅದಕ್ಕೆ ಸರಿಯಾದ ರೂಪ ಕೊಡುವವರೂ ಇದ್ದಾರೆ. ಹೇಗೆ ಆದರೂ ಕಲಾವಿದ ಮಾನಸಿಕವಾಗಿ ಸಿದ್ಧವಾಗಿದ್ದಾಗ ಮಾತ್ರ ಉತ್ತಮ ಕಲಾಕೃತಿ ಹೊರಹೊಮ್ಮುತ್ತದೆ.
ಹವ್ಯಾಸಿ ಕಲಾವಿದರಿಗಿಂತ ಬದುಕನ್ನೇ ಕಲೆಗಾಗಿರಿಸಿದ ಕಲಾವಿದರು ಕಲೆಯೊಂದಿಗೆ  ಹೆಚ್ಚು ಹೋರಾಟಮಾಡಬೇಕಾಗುತ್ತದೆ. ಇಂತವರು ಮಾನಸಿಕವಾಗಿ ಸಧೃಡರಾಗಿರಬೇಕು. ಕಲೆಯ ಉಳಿವಿನ ಜೊತೆಗೆ ತನ್ನನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಂತಹ ವೃತ್ತಿಪರ ಕಲಾವಿದರಿಗಿದೆ.  ಆರಂಭದಲ್ಲಿ ಉತ್ಸಾಹಿಗಳಾಗಿದ್ದ ಎಷ್ಟೊ ಕಲಾವಿದರು ಮಿಂಚಿ ಮರೆಯಾಗಿದ್ದಾರೆ, ಇನ್ನೂ ಕೆಲವರು ಕಲಾಸಾಗರದಲ್ಲಿ ಈಜಲಾಗದೆ ಮುಳುಗಿದ್ದಾರೆ. ಅದೆಷ್ಟೊ ಕಲಾವಿದರು ನೆಲೆ ಇಲ್ಲದೆ ನೆಲ ಕಚ್ಚಿದ್ದಾರೆ ಹಾಗೂ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಾಗದೆ ಕಲೆಯಿಂದ ದೂರವಾಗುತ್ತಿದ್ದಾರೆ.
ಆದರೆ ಇದಕ್ಕೆ ವಿರುದ್ಧವೆಂಬಂತೆ ಕಲೆಯನ್ನೇ ಬದುಕಾಗಿಸಿಕೊಂಡ ಹಲವರು, ಉತ್ತಮ ಸ್ಥಾನಮಾನ ಹೊಂದಿದ್ದಾರೆ. ಆರಂಭದ ಹೊಡೆತಗಳಿಗೆ ಕುಗ್ಗದೆ ತನ್ನ ಪ್ರತಿಭೆಯನ್ನು ಸರಿಯಾದ ಹಾಗೂ ವ್ಯವಸ್ಥಿತ ರೀತಿಯಲ್ಲಿ ಬಳಸಿ ಹೆಸರನ್ನು ಗಳಿಸಿದ್ದಾರೆ. ತನ್ನದೆ ಹೊಸ ಚಾಪನ್ನು ಮೂಡಿಸಿ ನೋಡುಗರನ್ನು ಸಂಪಾದಿಸುತ್ತಿದ್ದಾರೆ.
ಇಂತಹ ಕಲಾವಿದರ ಚಿತ್ರಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಇದನ್ನು ಬಳಸಿಕೊಂಡು ಕೆಲವರು, ಕಲೆಯನ್ನು ವ್ಯಾಪಾರದ ಸರಕನ್ನಾಗಿಸಲು ಹೊರಟಿದ್ದಾರೆ. ಆದರೆ ನಿಜವಾದ ಕಲೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅದೆಷ್ಟೋ ಹವ್ಯಾಸಿ ಹಾಗೂ ವೃತ್ತಿಪರ ಕಲಾವಿದರು, ಇಂದಿಗು ಜನರ ನಡುವೆ ಕೆಲಸ ಮಾಡುತ್ತಿದ್ದಾರೆ. ಕಲೆಯ ಆಶಯವನ್ನು ಈಡೇರಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತ ಬದುಕಿಗಾಗಿ ಕಲೆ ಎನ್ನುವುದನ್ನ ಸಾಬೀತುಗೊಳಿಸುತ್ತಿದ್ದಾರೆ.

No comments:

Post a Comment