May 27, 2011

ಮರೆಯಾಗುತ್ತಿರುವ “ಊರುಗಳು”
ಪ್ರತಿ ಊರಿಗೂ ತನ್ನದೆ ಆದಂತಹ ವಿಶೇಷಗಳಿವೆ. ತನ್ನದೆ ಆದ ಪ್ರಾಕೃತಿಕ ಲಕ್ಷಣಗಳಿವೆ. ನೈಸರ್ಗಿಕ ಸೌಂದರ್ಯವಿದೆ. ಒಂದು ಊರನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ರಸ್ತೆ, ಮರ-ಗಿಡ, ಸಣ್ಣಪುಟ್ಟ  ಅಂಗಡಿಗಳು, ತೋಟ-ಗದ್ದೆ, ಅಲ್ಲಿ ನಡೆಯುವ ಕೃಷಿ ಚಟುವಟಿಕೆಗಳು ಹೀಗೆ ಹತ್ತು ಹಲವಾರು ಸಂಗತಿಗಳು ನಮಗೆ ಆ ಊರಿನ ಚಿತ್ರಣವನ್ನು ಕೊಡುತ್ತವೆ.
ಆ ಊರಿನ ಜನ ಜೀವನದ ಪರಿಚಯ ಮಾಡುತ್ತವೆ.  ಹೀಗೆ ಊರಿಂದ ಊರಿಗೆ ಸಾಗುತ್ತಿರುವಾಗ ಪ್ರತಿ ಊರು ಕೂಡ ತನ್ನೊಳಗಿನ ವಿಶೇಷತೆಗಳನ್ನ, ವೈಶಿಷ್ಟ್ಯಗಳನ್ನ ತೆರೆದುಕೊಳ್ಳುತ್ತಾ ಹೋಗುತ್ತದೆ. ಊರನ್ನು ಪ್ರವೇಶಿಸದೆ, ಊರಿನ ಮೂಲಕ ಹಾದುಹೋದರೂ ಸಾಕು, ಪ್ರತೀ ಊರು ಒಂದು ಹೊಸ ಆಹ್ಲಾದ ಹಾಗು ಅನುಭವವನ್ನು ಉಂಟುಮಾಡುತ್ತದೆ.
ಆದರೆ ಇಂದು  ಅಭಿವೃದ್ಧಿಯ ಹೆಸರಿನಲ್ಲಿ ಈ ಊರುಗಳು ಕಣ್ಮರೆಯಾಗಿತ್ತಿವೆ. ನಗರೀಕರಣದ ಸೋಗಿನಲ್ಲಿ, ಸಾಲುಮರದ ತಿಮ್ಮಕ್ಕನಂತಹವರು ನೆಟ್ಟುಬೆಳೆಸಿದ ಅದೆಷ್ಟೂ ಸಾವಿರ ಸಾವಿರ ಮರಗಳು ರಕ್ಕಸಯಂತ್ರಗಳಿಗೆ ದಿನೇ ದಿನೆ ಬಲಿಯಾಗುತ್ತಿವೆ. ರಸ್ತೆ ಅಗಲೀಕರಣದ ನೆಪವೊಡ್ಡಿ ಕಡಿದಂತಹ 150-200 ವರ್ಷ ಹಳೆಯ ಮರಗಳ ಅಕ್ರಮ ಸಾಗಾಟ ನಡೆಯುತ್ತಿದೆ. ಕಾಸಗಿ ಗುತ್ತಿಗೆದಾರರು ಸರ್ಕಾರದ ಹಣವನ್ನು ಬೇಕಾಬಿಟ್ಟಿ ಬಳಸುತ್ತಿದ್ದಾರೆ. ಗುತ್ತಿಗೆ ಕೊಟ್ಟಂತಹ ಸರ್ಕಾರ ಜನರಲ್ಲಿ ಅಭಿವೃದ್ಧಿಯ ಭ್ರಮೆಯನ್ನು ತುಂಬುವ ಕೆಲಸದಲ್ಲಿ ನಿರತವಾಗಿದೆ. ಮೊದಲಾದರೆ ಕೇವಲ ಹೆದ್ದಾರಿ, ಸುತ್ತಮುತ್ತಲಿನ ಪರಿಸರ ನೋಡಿಯೆ ಇದು ಇಂತಹ ಊರು ಎನ್ನಬಹುದುತ್ತು. ಆದರೆ ಈಗಿನ ನಗರೀಕರಣದ ರಸ್ತಗಳು ಬಟ್ಟಂಬಯಲಾಗಿದೆ. ಹಸಿರಿನ ಸುಳಿವೇ ಕಾಣಸಿಗುತ್ತಿಲ್ಲ.
ಹೊಸದಾಗಿ ನಿರ್ಮಿಸುತ್ತಿರುವಂತಹ ಚತುಷ್ಪಥ ರಸ್ತಗಳು ಸ್ಥಳೀಯ ಜನಸಾಮಾನ್ಯರ ಬಳಕೆಗಿಂತ ಹೆಚ್ಚು, ಬೇರೆ ಬಹುರಾಷ್ಟ್ರೀಯ ಕಂಪೆನಿಗಳ ಸಂಪನ್ಮೂಲಗಳ, ಅದಿರು ಮುಂತಾದ ಖನಿಜಗಳ ಸಾಗಾಟಕ್ಕೆ ಪೂರಕವಾಗುವಂತೆ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಈ ರಸ್ತಗಳು ಎರಡು ದೊಡ್ಡ ನಗರಗಳನ್ನು ಸೇರಿಸುತ್ತವೆ ಹೊರತು ಎರಡು ಊರುಗಳ ಸಂಬಂಧವನ್ನು ಬೆಸೆಯುವುದಿಲ್ಲ. ಈ ಹೊಸ ಬೆಳವಣಿಗೆಗಳಿಂದ ಅದೆಷ್ಟೊ ರೈತರು ತಮ್ಮ ಅಲ್ಪಸ್ವಲ್ಪ ಫಲವತ್ತಾದ ಕೃಷಿಭೂಮಿಯನ್ನು ಕಳೆದುಕೊಂಡಿದ್ದಾರೆ. ಕೃಷಿಯ ಅಭಿವೃದ್ಧಿಯಾದಾಗ ಮಾತ್ರ ದೇಶ ಪ್ರಗತಿಕಾಣುತ್ತದೆ ಎನ್ನುವ ಮೂಲಭೂತ  ಅಂಶವನ್ನು ಮರೆತ ಸರ್ಕಾರ ಇಂದು ಕೈಗಾರಿಕರಣದಿಂದಲೇ ದೇಶದ ಅಭಿವೃದ್ಧಿ ಎನ್ನುತ್ತಿದೆ. ಕೈಗಾರಿಕರಣ, ನಗರೀಕರಣದಿಂದ ದೇಶ ಪ್ರಗತಿ ಕಾಣುವುದು, ಅವು ಕೃಷಿಗೆ ಪೂರಕವಾಗಿದ್ದಾಗ ಮಾತ್ರ. ಆದರೆ ಪ್ರಸಕ್ತ ಪರೀಸ್ಥಿತಿಯಲ್ಲಿ ರೈತಾಪಿ ವರ್ಗ ಕೃಷಿಯನ್ನು ದೂರಮಾಡಿ ನಗರೀಕರಣದತ್ತ ಮುಖಮಾಡುತ್ತಿದ್ದಾರೆ. ಹಣಕ್ಕಾಗಿ ಕೃಷಿಭೂಮಿ ಕಂಪೆನಿಗಳ ಪಾಲಾಗಿದೆ.
ರಸ್ತೆಯ ಅಗಲೀಕರಣದ ಪರಿಣಾಮ, ಊರುಗಳ ಗುರುತೇ ಸಿಗದಂತಾಗಿದೆ. ದೇಸಿ ಜಿವನ ಪದ್ಧತಿಯಿಂದ ಊರುಗಳು, ಯಾಂತ್ರಿಕತೆಗೆ ಒಳಗಾಗಿದೆ. ಇದು ಹೀಗೆ ಮುಂದುವರೆದರೆ, ತಿನ್ನುವ ಅನ್ನವನ್ನೂ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುವುದು ಖಂಡಿತ. ಆದ್ದರಿಂದ ಇನ್ನಾದರೂ ಸರ್ಕಾರ ರಸ್ತೆ ಅಗಲೀಕರಣ, ನಗರೀಕರಣಗಳ ಜೊತೆಗೆ ಕೃಷಿಯ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದರೆ ಮಾತ್ರ ಊರುಗಳು ಊರಾಗಿಯೇ ಉಳಿಯುತ್ತವೆ ಇಲ್ಲವಾದರೆ ಯಾಂತ್ರಿಕತೆಯ ಕಪಿಮುಷ್ಠಿಗೆ ಸಿಕ್ಕ ನಗರಗಳಾಗುತ್ತವೆ.

4 comments:

  1. urina bagegina kalajige danyavaadagalu....uttama lekhana

    ReplyDelete
  2. ಮಹಾನಗರವೆಂಬ ಮಹಾಸುಂದರಿಯ ತೆಕ್ಕೆಗೆ ಬೀಳುತ್ತಿರುವ ಯುವಜನತೆ ಒಂದೆಡೆಯಾದರೆ ,ಜಾಗತಿಕರಣದ ಪ್ರಭಾವದಿಂದ ಬದಲಾಗುತ್ತಿರುವ ಸಮಾಜ ಮತ್ತೊಂದೆಡೆ.ಈ ಘರ್ಷಣೆಗಳ ನಡುವೆ ಊರುಗಳು ಮರೆಯಾಗುತ್ತಿದೆಯೆಂಬ ನಿನ್ನ ಆತಂಕ ನಿಜವಾದದ್ದು.ಉತ್ತಮ ಬರಹ.

    ReplyDelete
  3. ಧನ್ಯವಾದಗಳು ಕೌಶಿಕ್... :)

    ReplyDelete